ಬೆಂಗಳೂರು: ಮೂಡಾ ಹಗರಣದ ಕುರಿತು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಕಮಲ-ದಳ ಮೈತ್ರಿ ನಾಯಕರಿಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ (GT Devegowda) ನೀಡಿರುವ ಹೇಳಿಕೆಯಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ಜೆಡಿಎಸ್ (JDS) ವಲಯದಲ್ಲಿ ಇದೀಗ ಜಿಟಿ ದೇವೇಗೌಡರ ಕೋಪ ಶಮನಕ್ಕೆ ಆಗ್ರಹ ಕೇಳಿಬಂದಿದೆ.
ದಸರಾ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರವಾಗಿ ಜಿ.ಟಿ.ದೇವೇಗೌಡ (GT Devegowda) ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯೆ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಬೇಕಾಬಿಟ್ಟಿ ಮಾತನಾಡಿದ್ದು, ಜೆಡಿಎಸ್ ನಾಯಕರ ತಲೆಬಿಸಿ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಟಿ ದೇವೇಗೌಡರ ಸಮಾಧಾನ ಪಡಿಸಲು ಅವರನ್ನು ಕರೆಸಿ ಮಾತನಾಡುವಂತೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರಿಗೆ ದುಂಬಾಲು ಬಿದ್ದಿದ್ದಾರೆ.
ಜಿ.ಟಿ.ದೇವೇಗೌಡರ (GT Devegowda) ಹೇಳಿಕೆಯನ್ನೇ ಕಾಂಗ್ರೆಸ್ ನಾಯಕರು ಮುಂದಿನ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗುರಾಣಿಯನ್ನಾಗಿಸಿಕೊಳ್ಳುವ ಅಪಾಯವಿದೆ. ಕಾಂಗ್ರೆಸ್ಸಿಗರು ಸಹ ಜಿಟಿಡಿ ಹೇಳಿಕೆಯನ್ನು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಗೆ ತಡೆಯಾಗಿ, ಸಮಜಾಯಿಷಿಯಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.
ಹಾಗಾಗಿ ಜಿಟಿ ದೇವೇಗೌಡ (GT Devegowda) ಅವರಿಂದ ಇನ್ನೊಂದಷ್ಟು ವ್ಯತಿರಿಕ್ತ ಹೇಳಿಕೆಗಳು ಹೊರಬರುವ ಮುನ್ನ ಅವರೊಡನೆ ಮಾತುಕತೆ ನಡೆಸಬೇಕೆಂದು ಜೆಡಿಎಸ್ ಶಾಸಕರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
ಜೆಡಿಎಸ್ ಶಾಸಕರ ಮನವಿಯ ಹಿನ್ನೆಲೆಯಲ್ಲಿ ದೇವೇಗೌಡರು ರಂಗಪ್ರವೇಶ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರಿಗೆ ಬರುವಂತೆ ಜಿ.ಟಿ.ದೇವೇಗೌಡರಿಗೆ ದೊಡ್ಡಗೌಡರು ಸಂದೇಶ ರವಾನಿಸಿದ್ದು ಒಂದೆರಡು ದಿನಗಳಲ್ಲಿ ಜಿ.ಟಿ.ಡಿ ಜತೆ ಮಾತುಕತೆ ನಡೆಸುವರೆಂದು ಹೇಳಲಾಗಿದೆ.