ದೊಡ್ಡಬಳ್ಳಾಪುರ; ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಯೋಗ ಪಂದ್ಯಾವಳಿಗಳಿಗೆ ನಗರದ ದೇವರಾಜ ಅರಸು ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ಚಾಲನೆ ನೀಡಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 500 ಯೋಗಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 4 ವೇದಿಕೆಗಳಲ್ಲಿ ವಿವಿಧ ವಿಭಾಗದ ಯೋಗ ಸ್ಪರ್ಧೆಗಳನ್ನು ನಡೆಸಲಾಯಿತು.
ಪ್ರತಿ ವಿಭಾಗಕ್ಕೂ 5 ಮಂದಿ ತೀರ್ಪುಗಾರರಿದ್ದರು. ಸ್ಪರ್ಧಿಗಳ ಭಾಗವಹಿಸಿಕೆ ವಿವರ ಹಾಗೂ ಸ್ಪರ್ಧೆಗಳಲ್ಲಿ ನೀಡಿದ ಅಂಕಗಳನ್ನು ಪ್ರಥಮ ಬಾರಿಗೆ ಡಿಜಿಟಲ್ ಪರದೆಯ ಮೂಲಕ ವೀಕ್ಷಣೆ ಮಾಡಲು ಅವಕಾಶ ಮಾಡಿದ್ದುದು ವಿಶೇಷವಾಗಿತ್ತು.
ಸ್ಪರ್ಧೆಯ ಬಗ್ಗೆ ಆಕ್ಷೇಪಣೆ ಇದ್ದರೆ ಅರ್ಧ ಗಂಟೆಯೊಳಗೆ ದೂರು ಸಲ್ಲಿಸಲು ಸಹ ಅವಕಾಶ ನೀಡಲಾಗಿತ್ತು.
ಪಂದ್ಯಾವಳಿಗಳಿಗಳ ಆಯೋಜನೆಯ ಬಗ್ಗೆ ಸ್ಪರ್ಧಿಗಳು ಹಾಗೂ ತಂಡದ ವ್ಯವಸ್ಥಾಪಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಎನ್. ಮಮೋಹನ್ ಕುಮಾರ್ ಮಾತನಾಡಿ, ದೊಡ್ಡಬಳ್ಳಾಪುರ ಯೋಗ ನಗರಿ ಎನ್ನುವುದು ಅನ್ವರ್ಥವಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ವಿದ್ಯಾರ್ಥಿಗಳು ಸಜ್ಜಾಗಬೇಕಿದ್ದು, ಯೋಗ ಇದಕ್ಕೆ ಇಂಬು ನೀಡುತ್ತವೆ.ಪದವಿ ಪೂರ್ವ ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಯೋಜನೆ ರೂಪಿಸಲಾಗಿದ್ದು, ಇದಕ್ಕೆ ವಿಶೇಷ ಅನುದಾನ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್‍ನ ಅಧ್ಯಕ್ಷ ಜೆ.ಆರ್.ರಾಕೇಶ್, ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಪ.ಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಮೋದ್ ಕುಲಕರ್ಣಿ, ಪ್ರಾಂಶುಪಾಲರ ಸಂಘದ ಕ್ರೀಡಾ ಕಾರ್ಯದರ್ಶಿ ಟಿ.ಮಹಾಂತೇಶಪ್ಪ, ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ನಟರಾಜ್, ರಾಷ್ಟ್ರೀಯ ಯೋಗಾಸನ ತೀರ್ಪುಗಾರ ಬಿ.ಜಿ.ಅಮರನಾಥ್, ದೈಹಿಕ ಶಿಕ್ಷಣ ನಿರ್ದೇಶಕರಾದ ದಾದಪೀರ್, ಶ್ರೀಕಾಂತ್ ಮೊದಲಾದವರು ಹಾಜರಿದ್ದರು.