
ರಾಜಾನುಕುಂಟೆ: ಕೌಟುಂಬಿಕ ಕಲಹದ ಹಿನ್ನಲೆ ಯುವಕನೋರ್ವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವೇಳೆ, ವಿಷಯ ತಿಳಿದ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳಲು ಓಡುತ್ತಿದ್ದ ಆತನನ್ನು ಬೆನ್ನತ್ತಿ ರಕ್ಷಿಸಿರುವ ರೋಚಕ ಘಟನೆ ರಾಜಾನುಕುಂಟೆಯಲ್ಲಿ ನಡೆದಿದೆ.
27 ವರ್ಷದ ಗೋಪಾಲ್ ಅತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ವರದಿಯ ಅನ್ವಯ ತನ್ನ ಸಹೋದರನಿಗೆ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಮನೆ ಬಿಟ್ಟು ಹೋಗಿದ್ದಾನೆ. ಇದರಿಂದ ಭಯಗೊಂಡ ಸಹೋದರ ಕೂಡಲೇ 112 ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಎಚ್ಚೆತ್ತ ಎಎಸ್‌ಐ ನಾಗೇಶ್ ಹಾಗೂ ಕಾನ್ ಸ್ಟೇಬಲ್ ಸಂಜೀವ್ ಕುಮಾರ್ ಅವರು ಗೋಪಾಲ್ ಇರುವ ಸ್ಥಳವನ್ನು ಪತ್ತೆ ಹಚ್ಚಿ ಆತನಿದ್ದ ಸ್ಥಳಕ್ಕೆ ಆಗಮಿಸಿದ್ದಾರೆ. ಇದನ್ನು ನೋಡಿದ ಗೋಪಾಲ್ ರೈಲ್ವೇ ಹಳಿಯ ಮೇಲೆ ಓಡಲು ಆರಂಭಿಸಿದ್ದಾನೆ.
ಇದನ್ನೂ ಓದಿ: ಕೃಷಿ ಹೊಂಡದಲ್ಲಿ ದೊಡ್ಡಬಳ್ಳಾಪುರ ಮೂಲದ ವಿದ್ಯಾರ್ಥಿ ಶವ ಪತ್ತೆ..!
ಈ ವೇಳೆ ಗೋಪಾಲ್ ನನ್ನು ಬೆನ್ನತ್ತಿದ ಪೊಲೀಸರು ಆತನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಳಿಕ ಆತನನ್ನು ಪೊಲೀಸ್ ಠಾಣೆಗೆ ಕರೆತಂದು ಬುದ್ಧಿ ಮಾತು ಹೇಳಿರುವ ಪೊಲೀಸರು, ಕುಟುಂಬಸ್ಥರ ಜೊತೆ ಕಳುಹಿಸಿಕೊಟ್ಟಿದ್ದಾರೆ.

ಸದ್ಯ ತಮ್ಮ ಪ್ರಾಣದ ಹಂಗನ್ನು ತೊರೆದು ಸಾರ್ವಜನಿಕರ ರಕ್ಷಣೆ ಮಾಡಿದೆ ಎಎಸ್ಐ ನಾಗೇಶ್ ಹಾಗೂ ಕಾನ್ ಸ್ಟೇಬಲ್ ಸಂಜೀವ್ ಕುಮಾರ್ ರ ಸಮಯಪ್ರಜ್ಞೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						