ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿರುವ ರಾಜ್ಯ ಹೆದ್ದಾರಿ ಸಿದ್ದೇನಾಯಕನಹಳ್ಳಿ ತಿರುವಿನ ಬಳಿ ಮತ್ತೆ ಅಪಘಾತ ಸಂಭವಿಸಿದ್ದು, ಈ ವ್ಯಾಪ್ತಿಯಲ್ಲಿ ಸಾಗುವ ವಾಹನ ಸವಾರರ ಪ್ರಾಣಕ್ಕೆ ಗ್ಯಾರಂಟಿ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಇಂದು ಬೆಳಗ್ಗೆ ಯಲಹಂಕ ಕಡೆಯಿಂದ ಬಂದ ಕಾರು ಸಿದ್ದೇನಾಯಕನಹಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿಯ ದೊಡ್ಡಬಳ್ಳಾಪುರ ಹೊರವಲಯದಲ್ಲಿರುವ ಸಿದ್ದೇನಾಯಕನಹಳ್ಳಿ ಬಳಿ ನಿರ್ಮಿಸಲಾಗಿರುವ ತಿರುವು ಅವೈಜ್ಞಾನಿಕವಾಗಿದೆ ಎಂಬ ಆರೋಪ ವ್ಯಾಪಕವಾಗಿದೆ.
ಟೋಲ್ ರಸ್ತೆಯಾದ ಕಾರಣ ವೇಗವಾಗಿ ಬರುವ ವಾಹನಗಳು ಏಕಾಏಕಿ ಎದುರಾಗುವ ತಿರುವಿನ ಕಾರಣ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗುತ್ತಿದೆ.
ಈ ರಸ್ತೆ ಸುಮಾರು 10 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಈ ಕುರಿತು ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ಪದೇ ಪದೇ ಟೋಲ್ ಸಂಸ್ಥೆಯವರಿಗೆ ಸಲಹೆ ಸೂಚನೆ ನೀಡಿದರು, ಪಾಲಿಸದೇ ಇರುವುದರಿಂದ ಅಪಘಾತಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಮಾತು ಪೊಲೀಸ್ ವಲಯದಲ್ಲಿ ಕೇಳಿಬಂದಿದೆ.