ಮುಲ್ಕಿ: ದಕ್ಷಿಣ ಕನ್ನಡದ ಮುಲ್ಕಿ ತಾಲೂಕಿನಲ್ಲಿ ಸಂಭವಿಸಿದ ಪತ್ನಿ ಮಗುವನ್ನು ಕೊಂದು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪಕ್ಷಿಕೆರೆ ಗ್ರಾಮದಲ್ಲಿ ಕಾರ್ತಿಕ್ ಭಟ್ ಮೊದಲು ಪತ್ನಿ ಪ್ರಿಯಾಂಕ ಹಾಗೂ ಪುತ್ರ ಹೃದಯ್ ನನ್ನು ಕೊಲೆ ಮಾಡಿ ಬಳಿಕ ಮುಲ್ಕಿ ಹೊರ ವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಕಾರ್ತಿಕ್ ನ ತಂದೆ, ತಾಯಿ ಶ್ಯಾಮಲಾ ಭಟ್, ಸಹೋದರಿ ಕಣ್ಮಣಿ ಎಂಬುವವರನ್ನು ಬಂಧಿಸಲಾಗಿದೆ.
ಆತ್ಮಹತ್ಯೆಗೆ ಮೊದಲು ಕೌಟುಂಬಿಕ ಕಲಹದ ಬಗ್ಗೆ ಕಾರ್ತಿಕ್ ಭಟ್ ಡೆತ್ ನೋಟ್ ಬರೆದಿದ್ದ ಈ ಹಿನ್ನೆಲೆಯಲ್ಲಿ ಕಾರ್ತಿಕ್ ಕುಟುಂಬದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ನಮ್ಮ ಸಂಸಾರ ಹಾಳು ಮಾಡಿದ್ದೇ ತಂದೆ, ತಾಯಿ, ಸಹೋದರಿ. ಇಂತಹ ತಂದೆ, ತಾಯಿ ಯಾರಿಗೂ ಸಿಗಬಾರದು. ನನ್ನ ಈ ಪರಿಸ್ಥಿತಿಗೆ ಇವರೇ ಕಾರಣ, ದಯವಿಟ್ಟು ನಮ್ಮ ಅಂತ್ಯಸಂಸ್ಕಾರವನ್ನು ಅತ್ತೆ ಮಾವ ನಡೆಸಿಕೊಡಬೇಕು ಎಂದು ಡೆತ್ ನೋಟ್‌ನಲ್ಲಿ ಮೃತ ಕಾರ್ತಿಕ್ ಬರೆದುಕೊಂಡಿದ್ದ.
ಅಲ್ಲದೇ ಈ ಬಗ್ಗೆ ಮೃತ ಪ್ರಿಯಾಂಕಾ ಪೋಷಕರು ಕೂಡ ಕಾರ್ತಿಕ್ ಕುಟುಂಬದವರ ಮೇಲೆ ದೂರು ನೀಡಿದ್ದು ಅತ್ತೆ ಮಾವನ ಕಿರುಕುಳದಿಂದಲೇ ಈ ಘಟನೆ ನಡೆದಿರುವುದು ಎಂದು ಆರೋಪಿಸಲಾಗಿದೆ.
ಸದ್ಯ ಪ್ರಿಯಾಂಕಾ ಕುಟುಂಬಸ್ಥರ ದೂರಿನ ಮೇರೆಗೆ ಹಾಗೂ ಡೆತ್ ನೋಟ್ ಆದಾರದ ಮೇಲೆ ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ.