ದೊಡ್ಡಬಳ್ಳಾಪುರ; ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದಿಂದ ಬಯಲು ಬಸವಣ್ಣ ಕಡಲೇಕಾಯಿ ಪರಿಷೆ ಅಂಗವಾಗಿ 9 ಜಿಲ್ಲೆಗಳ ಅಂತರ ಜಿಲ್ಲಾ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗಳಿಗೆ ( kusti in doddaballapura) ಬಸವಣ್ಣ ದೇವಾಲಯದ ಎದುರಿನ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಸಾಂಪ್ರದಾಯಿಕ ಮಣ್ಣಿನ ಅಖಾಡ (ಮಟ್ಟಿ)ದಲ್ಲಿ ನಡೆದ ಕುಸ್ತಿ ಪಂದ್ಯಾವಳಿಗಳಲ್ಲಿ ಸೆಣಸಾಡುವ ಕುಸ್ತಿ ಪಟುಗಳ ಕಾದಾಟವನ್ನು ನೂರಾರು ಜನ ಕಣ್ತುಂಬಿಕೊಂಡು ಸಂತಸ ಪಟ್ಟರು.
ಕುಸ್ತಿ ಪಟುಗಳ ಜಂಗಿ ಕುಸ್ತಿಯಾಟ ಮೈನವಿರೇಳಿಸಿತು.
ನಗರಸಭೆ ಸದಸ್ಯ ಹೆಚ್.ಎಸ್.ಶಿವಶಂಕರ್ ಮಾತನಾಡಿ, ನಮ್ಮ ಪಾರಂಪರಿಕ ಕ್ರೀಡೆಯಾದ ಕುಸ್ತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದ ಪಾತ್ರ ಹೆಚ್ಚಾಗಿದೆ. ಆದರೆ ಇತ್ತೀಚೆಗೆ ಕುಸ್ತಿ ಪಂದ್ಯಾವಳಿಗಳ ಕೊರತೆಯುಂಟಾಗಿತ್ತು.
ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದಿಂದ ಇಂದು ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಗಳು ಕುಸ್ತಿ ಪಟುಗಳಿಗೆ ಉತ್ತೇಜನ ನೀಡಲಿದೆ. ಕುಸ್ತಿ ಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿ ಕೀರ್ತಿ ಗಳಿಸಲಿ ಎಂದರು.
ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಮಾತನಾಡಿ, ಕುಸ್ತಿ ಕಲೆಗೆ ಉತ್ತೇಜಿನ ನೀಡುವ ಸಲುವಾಗಿ ತಾಲೂಕಿನ ಗರುಡಿ ಮನೆಗಳ ಸಹಕಾರದೊಂದಿಗೆ ತಾಲೂಕು ಕುಸ್ತಿ ಸಂಘ ಸ್ಥಾಪಿಸಿ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತಿದ್ದು,ಕ್ರೀಡಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕುಸ್ತಿ ಕಲೆ ನಮ್ಮ ತಲೆಮಾರಿಗೆ ಕೊನೆಯಾಗುವುದು ಬೇಡ. ಇಂದಿನ ಪೀಳಿಗೆಗೆ ಗರುಡಿ ಮನೆಗಳ ಪರಿಚಯವಾಗಬೇಕು. ಇಂದಿನ ಪೀಳಿಗೆ ಕುಸ್ತಿ ಕಲಿತರೆ ಸಾಕಷ್ಟು ಪ್ರಯೋಜನಗಳಿವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವ ಅವಕಾಶಗಳಿವೆ ಎಂದರು.
ಕುಸ್ತಿ ಪಂದ್ಯಾವಳಿಗಳ ಉದ್ಘಾಟನೆ ಕಾರ್ಯಿಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ಪೌರಾಯುಕ್ತ ಕಾರ್ತಿಕ್ ಈಶ್ವರ್, ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದ ಗೌ.ಅಧ್ಯಕ್ಷ ಪೈಲ್ವಾನ್ ಚೌಡಪ್ಪ, ಕಾರ್ಯೊದರ್ಶಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಗಣೇಶ್ ರಾಜಘಟ್ಟ, ಗೌ.ಅಧ್ಯಕ್ಷ ಪಿಳ್ಳಣ್ಣ, ನಗರಸಭಾ ಸದಸ್ಯರಾದ ಎಸ್.ಪದ್ಮನಾಭ್, ಅಖಿಲೇಶ್, ಖಜಾಂಚಿ ವಿಶ್ವನಾಥ್, ಇನ್ಸ್ಪೆಕ್ಟರ್ ಅಮರೇಶ್ ಗೌಡ, ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಬಯಲು ಬಸವಣ್ಣ ಸೇವಾ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.