ಬೆಂಗಳೂರು; ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಸೋಲಿನ ಮುಖಭಂಗ, ಪಕ್ಷದಲ್ಲಿನ ಆಂತರಿಕ ಕಿತ್ತಾಟದ ಹಿನ್ನೆಲೆಯಲ್ಲಿಬರುವ ಹೊಸ ವರ್ಷದ ಆರಂಭದಲ್ಲಿ ರಾಜ್ಯ ಬಿಜೆಪಿಯಲ್ಲಿ (BJP) ಮಹತ್ತರ ಬದಲಾವಣೆ ಆಗಲಿದ್ದು, ಸಂಘಟನೆಗೆ ಹೊಸ ಸ್ವರೂಪ ಸಿಗಲಿದೆ ಎಂದು ವರದಿಯಾಗಿದೆ.
ಮೂಲಗಳ ಮಾಹಿತಿಯಂತೆ ಪಕ್ಷದ ಕೆಲವು ಅಸಮರ್ಥ ಪದಾಧಿಕಾರಿಗಳಿಗೆ ಕೊಕ್, ಹೊಸಬರಿಗೆ ಅವಕಾಶ ಸಂಭವವಿದ್ದು, ಅನುಭವದ ಜೊತೆಗೆ ಜಾತಿ, ಪ್ರಾದೇಶಿಕ ಸಮತೋಲನಕ್ಕೆ ಒತ್ತು ನೀಡಿ ಜಿಪಂ, ತಾಪಂ ಚುನಾವಣೆಗೆ ಸಿದ್ಧತೆಗೆ ಮುಂದಾಗಿದೆ.
ಈ ಸಂಬಂಧ ಬಿಜೆಪಿ ಹೈಕಮಾಂಡ್ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸೂಚಿಸಿದ್ದು, ಪದಾಧಿಕಾರಿಗಳ ಪೈಕಿ ಹಲವರ ಕೈಬಿಟ್ಟು ಹಿರಿಯರು ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸಬಲ್ಲ ವರಿಗೆ ಅವಕಾಶ ಕಲ್ಪಿಸಲಾಗುವುದು ಜೊತೆಗೆ ಕೋರ್‌ಕಮಿಟಿಯನ್ನು ಹೊಸದಾಗಿ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಎಲ್ಲ ಬದಲಾವಣೆಗಳನ್ನು ಮಾಡುವ ಮೂಲಕ ಮುಂದಿನ ವರ್ಷದಲ್ಲಿ ಬರಬಹುದಾದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ, ಬಿಬಿಎಂಪಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸಜ್ಜಾಗಲು ಬಯಸಿದೆ.
ಸದ್ಯ ಪಕ್ಷದ ಸಂಘಟನಾ ಪರ್ವ ನಡೆಯುತ್ತಿದ್ದು, ಮುಂದಿನ ಡಿಸೆಂಬರ್ ಮೂರನೇ ವಾರ ಅಂತ್ಯಗೊಳ್ಳಲಿದೆ. ಆ ಬಳಿಕ ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡುವತ್ತ ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರು ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ.
ಈಗಿರುವ ರಾಜ್ಯ ಪದಾಧಿಕಾರಿಗಳ ಪೈಕಿ ವಿಜಯೇಂದ್ರ ಅವರು ತಮ್ಮ ಆಪ್ತರಿಗೆ ಆದ್ಯತೆ ನೀಡಿ ಸಂಘಟನೆಯಲ್ಲಿ ಹೆಚ್ಚು ಅನುಭವ ಇರುವವರನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆರೋಪವಿದೆ. ಹೀಗಾಗಿ ಅಂಥವರನ್ನು ಕೈಬಿಟ್ಟು ಸಮರ್ಥರನ್ನು ಒಳಗೊಂಡು ತಂಡವನ್ನು ಕಟ್ಟಲು ನಿರ್ಧರಿಸಲಾಗಿದೆ.
ಅಲ್ಲದೆ ಪದಾಧಿಕಾರಿಗಳಲ್ಲಿ ಸಂಘಟನೆಯ ಅನುಭವದ ಜೊತೆಗೆ ಜಾತಿ ಮತ್ತು ಪ್ರಾದೇಶಿಕ ಸಮತೋಲನ ಕಾಪಾಡಬೇಕು. ಆಗ ಭಿನ್ನಾಭಿಪ್ರಾಯ ಕೂಡ ಕಡಿಮೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.