ಬೆಂಗಳೂರು: ಬಂಗಾಳ ಕೊಲ್ಲಿಯ ನೈರುತ್ಯದಲ್ಲಿ ವಾಯುಭಾರ ಕುಸಿತ (cyclonefengal) ಉಂಟಾಗಿರುವುದರಿಂದ ಬೆಂಗಳೂರು ಸೇರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಶನಿವಾರದಿಂದ 4 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.
ಡಿ.2ರಂದು ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಸೇರಿ 10 ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಡಿ.3 ರಂದು 12 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.
ಚೆನ್ನೈ ನಗರ ತತ್ತರ
ಫೆಂಗಾಲ್ ಚಂಡಮಾರುತದಿಂದ ಸುರಿದ ಮಳೆಯಿಂದಾಗಿ ಚೆನ್ನೈ ನಗರ ತತ್ತರಿಸಿದೆ. ನಗರದ 134ಕ್ಕೂ ಹೆಚ್ಚು ಸ್ಥಳಗಳಲ್ಲಿ ನೀರು ನಿಂತಿದೆ. ಭಾರೀ ಮಳೆ ಮುಂದುವರಿದ ಕಾರಣ 7 ಪ್ರಮುಖ ಸುರಂಗಮಾರ್ಗಗಳನ್ನು ಚಂಡಮಾರುತದಿಂದ ಉಂಟಾದ ಮುಚ್ಚಲಾಗಿದೆ.
ಬಲವಾದ ಅಡ್ಡಗಾಳಿಯಿಂದಾಗಿ ಚೆನ್ನೈ ವಿಮಾನ ನಿಲ್ದಾಣವು ಶನಿವಾರ ಮಧ್ಯಾಹ್ನ 12 ರಿಂದ ಸಂಜೆ 7 ರವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.
ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿ ಸೇರಿದಂತೆ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿದೆ.
ರಾಣಿಪೇಟ್, ತಿರುವಣ್ಣಾಮಲೈ, ವೆಲ್ಲೂರು, ಪೆರಂಬಲೂರು, ಅರಿಯಲೂರು, ತಂಜಾವೂರು, ತಿರುವರೂರು, ಮೈಲಾಡುತುರೆ, ನಾಗಪಟ್ಟಿಣಂ ಮತ್ತು ಕಾರೈಕಲ್ನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ತಮಿಳುನಾಡು ಸಿಎಂ ಸ್ಟಾಲಿನ್ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸರಕಾರ ಶನಿವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿತ್ತು. ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಐಟಿ ಸಂಸ್ಥೆಗಳಿಗೆ ಮನವಿ ಮಾಡಿದೆ.