ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ (champa shashti) ಅಂಗವಾಗಿ ಇಂದು ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
ನಾಗಾರಾಧನೆಗೆ ಪ್ರಸಿದ್ದವಾಗಿರುವ ಘಾಟಿ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಅಂಗವಾಗಿ ಬೆಳಿಗ್ಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಸಲಾಗುತ್ತಿದೆ.
ಭಕ್ತರು ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಸಾಮಾನ್ಯವಾಗಿ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ಸಂಪನ್ನಗೊಂಡಿದೆ.
ಅಶ್ವತ್ಥಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ ಹಾಲೆರೆದು ಅಭಿಷೇಕ ಮಾಡಿ ನೈವೇದ್ಯ ಅರ್ಪಿಸಿ ಇಂದು ಉಪವಾಸ ವ್ರತ ಆಚರಿಸುವ ಪದ್ಧತಿಯಿದೆ.

ಕುಕ್ಕೆಗೆ ತೆರಳಲು ಸಾಧ್ಯವಾಗದ ಭಕ್ತಾದಿಗಳು ಘಾಟಿ ಕ್ಷೇತ್ರದಲ್ಲಿಯೇ ನಾಗಾರಾಧನೆ ಮಾಡಿ ತಮ್ಮ ಇಷ್ಟಾರ್ಥ ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ.
