ಕಾರವಾರ: ಶಾಲಾ ಪ್ರವಾಸಕ್ಕೆ ತೆರಳಿದ್ದ ವೇಳೆ ನಾಲ್ವರು ವಿದ್ಯಾರ್ಥಿನಿಯರು ಮುರುಡೇಶ್ವರದಲ್ಲಿ ಬೀಚ್ ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ಸುಮೊಟೋ ಕೇಸ್ (Sumoto case) ದಾಖಲಾಗಿದೆ.
ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಸುನೀಲ್ ಚೌಡಪ್ಪ, ವಿಶ್ವನಾಥ್, ಸಿ.ಎನ್ ಶಾರದಮ್ಮ ಹಾಗೂ ಕೆ ನರೇಶ ಸೇರಿ ಆರು ಮಂದಿ ವಿರುದ್ಧ ಮುರುಡೇಶ್ವರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಅಲ್ಲದೆ ಮುಖ್ಯಶಿಕ್ಷಕಿಯನ್ನು ಅಮಾನತು ಮಾಡಲಾಗಿದ್ದು, ಕೆಲವು ಶಿಕ್ಷಕರನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೆಶ್ವರಕ್ಕೆ ಬಂದಿದ್ದರು.
ಈ ವೇಳೆ ಕಡಲ ತೀರದಲ್ಲಿ ಆಟವಾಡುವಾಗ ಅಲೆಗಳ ಅಬ್ಬರಕ್ಕೆ ಸಿಲುಕಿ 7 ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು. ಅವರಲ್ಲಿ ಮೂವರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದರು.
ಉಳಿದ ನಾಲ್ವರ ಪೈಕಿ ಒಬ್ಬಳ ಶವ ಪತ್ತೆಯಾಗಿತ್ತು. ಉಳಿದ ಮೂವರು ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಇದೀಗ ಮೂವರು ವಿದ್ಯಾರ್ಥಿನಿಯರ ಶವವನ್ನು ಕರಾವಳಿ ಕಾವಲು ಪಡೆ ಪತ್ತೆಮಾಡಿ ಹೊರತೆಗೆದಿದೆ.
ಮೃತರ ವಿವರ: ಮಂಗಳವಾರ ಶಾವಂತಿ (15)ಯ ಮೃತದೇಹ ಪತ್ತೆಯಾಗಿತ್ತು. ಇಂದು (ಡಿಸೆಂಬರ್ 11) ದೀಕ್ಷಾ (15), ಲಾವಣ್ಯ (15), ವಂದನಾ (15) ಮೃತ ದೇಹಗಳು ಪತ್ತೆಯಾಗಿವೆ.
ಈ ದುರ್ಘಟನೆಯಲ್ಲಿ ಮಡಿದ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ.