ದೊಡ್ಡಬಳ್ಳಾಪುರ: ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ (Accident) ಓರ್ವ ಸಾವನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಹುಲಿಕುಂಟೆ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಘಟನೆಯಲ್ಲಿ ಹುಲಿಕಯಂಟೆ ಕಾಲೋನಿ ನಿವಾಸಿ ಶಿವಣ್ಣ (65 ವರ್ಷ) ಸಾವನಪ್ಪಿದ್ದಾರೆ.
ಇಂದು ಬೆಳಗ್ಗೆ ಹುಲಿಕುಂಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ನಲ್ಲಿ ತಿರುವು ಪಡೆಯುವ ವೇಳೆ ದೊಡ್ಡಬಳ್ಳಾಪುರ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶಿವಣ್ಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರು, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಹುಲಿಕುಂಟೆ ಬಳಿ ಪದೇ ಪದೇ ಅಪಘಾತ ಸಂಭವಿಸಿ, ಸ್ಥಳೀಯರು ಅಕಾಲಿಕವಾಗಿ ಸಾವನಪ್ಪುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ಸುಮಾರು ಎರಡು ಕಿಮಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದ ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ರಸ್ತೆ ತಡೆ ಹಿಂಪಡೆಯಲು ಮನವೊಲಿಸಿದರು.
ಅಪಘಾತದ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.