ಹೈದರಾಬಾದ್: ಪುಷ್ಪ 2 ಪ್ರಿಮಿಯರ್ ಶೋ ಪ್ರದರ್ಶನದ ವೇಳೆ ಸಂಧ್ಯಾ ಚಿತ್ರಮಂದಿರ ಬಳಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ಮೇಲೆ ಬಿಡುಗಡೆಯಾಗಿರುವ ಹೈದರಾಬಾದ್ ಪೊಲೀಸರು ನಿನ್ನೆ (ಡಿ.23) ನಟ ಅಲ್ಲು ಅರ್ಜುನ್ (Allu arjun) ಮತ್ತೆ ಹೊಸ ನೋಟಿಸ್ ಜಾರಿ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಅಲ್ಲು ಅರ್ಜುನ್‌ಗೆ ನೋಟಿಸ್‌ನಲ್ಲಿ ಸಮನ್ಸ್ ನೀಡಲಾಗಿದೆ.
ಘಟನೆ ಕುರಿತು ಸಿಎಂ ರೇವಂತ್ ರೆಡ್ಡಿ ಅವರು ಸದನದಲ್ಲಿ ವಿಸ್ತಾರವಾದ ಮಾಹಿತಿ ನೀಡಿದ ಬೆನ್ನಲ್ಲೆ, ಅಲ್ಲು ಅರ್ಜುನ್ ದಿಢೀರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಿಮಿಯರ್ ಶೋ ವೇಳೆ ಉಂಟಾದ ಕಾಲ್ತುಳಿತದ ಬಳಿಕ ನಟ ಅಲ್ಲು ಅರ್ಜುನ್ ವರ್ತಿಸಿರುವ ರೀತಿ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಭಾನುವಾರ ಸಂಜೆ ವಿದ್ಯಾರ್ಥಿಗಳು ಎನ್ನಲಾಗುತ್ತಿರುವವರು ಅಲ್ಲು ಅರ್ಜುನ್ ಮನೆಯ ಮೇಲೆ ದಾಳಿ ನಡೆಸಿದ್ದರು.
ಇನ್ನೂ ಈ ಘಟನೆ ರಾಜಕೀಯ ತಿರುವು ಪಡೆದಿದ್ದು, ಕಾಲ್ತುಳಿತದಲ್ಲಿ ಮಹಿಳೆ ಸಾವನಪ್ಪಿ, ಒಂಬತ್ತು ವರ್ಷದ ಮಗು ಬ್ರೈನ್ ಡೆಡ್ ಆಗಿ ಆಸ್ಪತ್ರೆ ಪಾಲಾಗಿರುವ ಕುರಿತು ಕನಿಷ್ಠ ಸಣ್ಣ ವರದಿ ಮಾಡದ ಕೆಲ ರಾಷ್ಟ್ರೀಯ ಸುದ್ದಿ ವಾಹಿನಿಗಳು, ಈ ಪ್ರಕರಣವನ್ನು ಕಾಂಗ್ರೆಸ್, ಬಿಜೆಪಿ, ಮೋದಿ, ರಾಹುಲ್ ಗಾಂಧಿ, ರೇವಂತ್ ರೆಡ್ಡಿ ಎಂಬಂತೆ ರಾಜಕೀಯ ಬಣ್ಣ ಬಳೆಯುತ್ತಿದ್ದು, ನೆಟ್ಟಿಗರಿಂದ ಛೀಮಾರಿಗೆ ಒಳಗಾಗುತ್ತಿವೆ.
ಘಟನೆ ಹಿನ್ನೆಲೆ: ಡಿಸೆಂಬರ್ 4 ರಂದು, ಪುಷ್ಪಾ 2 ಸಿನಿಮಾದ ಪ್ರೀಮಿಯರ್ ಶೋ ಹೈದರಾಬಾದ್‌ನ ಐಕಾನಿಕ್ ಸಂಧ್ಯಾ ಥಿಯೇಟರ್‌ನಲ್ಲಿ ಆಯೋಜಿಸಿದ್ದ ವೇಳೆ ಅನುಮತಿ ಇಲ್ಲದೆ ಅಲ್ಲು ಅರ್ಜುನ್ ವರ್ತಿಸಿದ ರೀತಿಯಿಂದ ನೂಕುನುಗ್ಗಲು ಉಂಟಾದ ಸಂದರ್ಭದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದರು ಮತ್ತು ಅವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲು ಅರ್ಜುನ್ ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಈ ಘಟನೆ ನಡೆದಿತ್ತು.