
ಧಾರವಾಡ: ಧಾರವಾಡ ಜಿಲ್ಲೆಯ ತೇಗೂರು ಗ್ರಾಮದ ಎಮ್ಮೆ ತಳಿ ಸಂವರ್ಧನಾ ಕೇಂದ್ರ 1910 ಪ್ರಾರಂಭವಾದ ಸಂಸ್ಥೆಯು ಜಾನುವಾರು ಕ್ಷೇತ್ರವೆಂದು ರೂಪಾಂತರಗೊಂಡು 1976 ರಲ್ಲಿ ಎಮ್ಮೆ (Buffalo) ತಳಿ ಸಂವರ್ಧನಾ ಕೇಂದ್ರವೆಂದು ನಾಮಕರಣಗೊಂಡಿತು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಇಂದು ಬೆಳಿಗ್ಗೆ ಧಾರವಾಡದ ತೇಗೂರಿನ ಎಮ್ಮೆ ತಳಿ ಸಂವರ್ಧನಾ ಕೇಂದ್ರಕ್ಕೆ ಭೇಟಿ ನೀಡಿ, ಮಾತನಾಡಿದ ಅವರು ಪ್ರಮುಖವಾಗಿ ಕೃಷ್ಣವ್ಯಾಲಿ ಎಂಬ ಸ್ಥಳೀಯ ತಳಿಯನ್ನು ಸಂರಕ್ಷಣೆ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿಯೇ ಇದು ಒಂದೇ ಒಂದು ಕೇಂದ್ರವಾಗಿದೆ.
ಜಾನುವಾರು ಗಣತಿ ಪ್ರಕಾರ 2019 ರ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 2 ಲಕ್ಷ ಜಾನುವಾರುಗಳಿದ್ದು, ಇದರಲ್ಲಿ ಸುಮಾರು 50 ಸಾವಿರ ಎಮ್ಮೆಗಳಿವೆ. ಉಳಿದಂತೆ ಆಕಳು, ಆಡು ಇನ್ನೂಳಿದಂತೆ ವಿವಿಧ ಪ್ರಬೇಧದ ಜಾನುವಾರಗಳು ಇವೆ. ರಾಜ್ಯದ ವಿವಿಧ ಭಾಗಗಳಲ್ಲಿ ಬರಗಾಲ, ಅತಿವೃಷ್ಟಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ.
ಇಂತಹ ಸಂದರ್ಭದಲ್ಲಿ ಕೇವಲ ಕೃಷಿಗೆ ಮಾತ್ರ ಅವಲಂಭಿತರಾಗದೆ ಇತರ ಕೃಷಿ ಉಪಕಸುಬುಗಳಾದ ಎಮ್ಮೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮುಂತಾದ ಕ್ರಮಗಳನ್ನು ಕೈಗೊಳ್ಳುವುದರಿಂದ ಆರ್ಥಕವಾಗಿ ಸಹಾಯಕವಾಗಿದೆ. ಇದರಿಂದ ರೈತರು ಆದಾಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಹಾಲು ಉತ್ಪಾದನೆಗೆ ಹೆಚ್ಚು ಅವಕಾಶವಿದೆ ಎಂದು ಅವರು ಹೇಳಿದರು.
ಜಾನುವಾರು ತಳಿ ಸಂವರ್ಧನಾ ಕೇಂದ್ರದ ವಿವರ: ಜಾನುವಾರು ತಳಿ ಸಂವರ್ಧನಾ ಕೇಂದ್ರದ ಜಾನುವಾರುಗಳ ಆಹಾರಕ್ಕೆ ಅನುಕೂಲವಾಗುವಂತೆ ಕ್ಕೆ ನೀರಾವರಿ ಆಶ್ರಯದ 53 ಎಕರೆ ಕ್ಷೇತ್ರದಲ್ಲಿ, ಮಳೆಯ ಆಶ್ರಯದ 51 ಎಕರೆ ಕ್ಷೇತ್ರದಲ್ಲಿ ಮೇವು ಬೆಳೆಯಲಾಗುತ್ತದೆ. ಜಾನುವಾರುಗಳನ್ನು ಮೇಯಿಸಲು 126.09 ಎಕರೆಯ ವಿಸ್ತೀರ್ಣದ ಪ್ರದೇಶವನ್ನು ಕಾಯ್ದಿರಿಸಲಾಗಿದೆ, 41 ಎಕರೆ ವಿಸ್ತೀರ್ಣದಲ್ಲಿ ಕೆರೆ, ಬಾವಿ, ಟ್ರೆಂಚ್‍ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಕೇಂದ್ರದ ಮೂಲ ಧೈಯೋದ್ದೇಶ: ರಾಜ್ಯ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಮುಖ್ಯವಾದ ಉದ್ದೇಶವೆಂದರೆ ರಾಜ್ಯದ ಘನೀಕೃತ ವೀರ್ಯ ಸಂಸ್ಕರಣಾ ಕೇಂದ್ರಗಳಿಗೆ ಉತ್ಕೃಷ್ಟ ಹಾಲಿನ ಇಳುವರಿ ಹೊಂದಿದ ಎಮ್ಮೆಗಳಿಗೆ ಜನಿಸಿದ ಗಂಡು ಎಮ್ಮೆ ಕರು ಅಥವಾ ಕೋಣ ಕರುಗಳನ್ನು ನೀಡುವುದು.
ನಂತರ ಈ ಕೋಣಗಳಿಂದ ವೀರ್ಯವನ್ನು ಸಂಗ್ರಹಿಸಿ ಸಂಸ್ಕರಿಸಿದ ವೀರ್ಯ ಕಡ್ಡಿಗಳನ್ನು ರಾಜ್ಯದ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಿಗೆ, ಕೃತಕಗರ್ಭಧಾರಣ ಮಾಡಲು ಉಪಯೋಗಿಸಲಾಗುತ್ತಿದೆ. ಆದರಿಂದ ಇದು ರಾಜ್ಯದ ಏಕೈಕ ಮಾತೃ ಕೋಣ ಉತ್ಪಾದನಾ ಸಂಸ್ಥೆಯಾಗಿದೆ.
ಕ್ಷೇತ್ರದಲ್ಲಿ ಹೆಚ್ಚಿನ ಇಳುವರಿ ಬರುವ ಸೂಪರ್ ಹೈಬ್ರಿಡ್ ನೇಪಿಯರ್, ಕಾಫ್ಸ್, ಗಿನಿಹುಲ್ಲು, ಗ್ರೇಝಿಂಗ್‍ಗಿನಿ, ಮೆಕ್ಕೆಜೊಳ, ಅಲಸಂಧಿ, ಸುಬಾಬುಲ್ಸ್ ಮತ್ತು ಹೆಜ್ಚ್‍ಲೂಸರ್ನ್ ಮುಂತಾದ ಮೇವಿನ ಬೆಳೆಗಳನ್ನು ಬೆಳೆದು ನಿಯಮಿತವಾಗಿ ಜಾನುವಾರುಗಳಿಗೆ ಮೇಯಿಸಲಾಗುತ್ತಿದೆ.
ಕ್ಷೇತ್ರದ ಹೈನೋದ್ಯಮದಲ್ಲಿ ಆಸಕ್ತರಿಗೆ ಅಧಿಕ ಇಳುವರಿ ನೀಡುವ ಮೇವಿನ ಬೀಜ, ಬೇರು ಮತ್ತು ಕಾಂಡಗಳನ್ನು ಇಲಾಖೆ ನಿಗಧಿಪಡಿಸಿದ ದರದಲ್ಲಿ ವಿತರಿಸಲಾಗುತ್ತದೆ. ಮತ್ತು ಹೆಚ್ಚುವರಿಯಾಗಿ ಉಳಿದ ಹಸಿರು ಮೇವನ್ನು ರಸಮೇವನ್ನಾಗಿ ಪರಿವರ್ತಿಸಿ ಬೇಸಿಗೆ ಹಾಗೂ ಮೇವು ಅಭಾವದ ಸಂಧರ್ಭಗಳಲ್ಲಿ ಜಾನುವಾರುಗಳಿಗೆ ನೀಡಿ ನಿರ್ವಹಿಸಲಾಗುತ್ತದೆ. ಕ್ಷೇತ್ರದಲ್ಲಿ ಎರೇಹುಳು ಗೊಬ್ಬರ ತಯಾರಿಸುವ ಘಟಕವಿದ್ದು, ಪ್ರಾತ್ಯಕ್ಷೀಕೆಯೊಂದಿಗೆ ಆಸಕ್ತರಿಗೆ ವಿವರಿಸಲಾಗುತ್ತದೆ.
2019-20ನೇ ಸಾಲಿನಲ್ಲಿ ಅಳುವಿನಂಚಿನಲ್ಲಿರುವ ದೇಶಿ ಆಕಳು ತಳಿಯಾದ ಕೃಷ್ಣವ್ಯಾಲಿ ಜಾನುವಾರುಗಳನ್ನು ಜಾನುವಾರು ಸಂವರ್ಧನಾ ಕೇಂದ್ರ ಮುನಿರಬಾದನಿಂದ ತೇಗೂರು ಕ್ಷೇತ್ರಕ್ಕೆ ವರ್ಗಾಯಿಸಿ ತಳಿ ಸಂರಕ್ಷಣಾ ಯೋಜನೆಯನ್ನು ಮುಂದುವರಿಸಲಾಗುತ್ತಿದೆ.
2022-23ನೇ ಸಾಲಿನಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸರ್ಕಾರಿ ಸೌಮ್ಯದ ಹಂದಿ ಉತ್ಪಾದನಾ ಘಟಕವನ್ನು ತೇಗೂರು ಕ್ಷೇತ್ರದಲ್ಲಿ ಪ್ರಾರಂಭಿಸಲಾಗಿದೆ. ಈ ಕ್ಷೇತ್ರದಲ್ಲಿ ಪ್ರಮುಖ ಮಾಂಸ ಹಾಗೂ ಮರಿ ಉತ್ಪಾದನೆಯಲ್ಲಿ ಉತ್ಕೃಷ್ಟವಾದ ವಿದೇಶಿ ಹಂದಿ ತಳಿಗಳಾದ ಯಾರ್ಕಶೈರ್, ಡ್ಯೂರಾಕ್ ಮತ್ತು ಲ್ಯಾಂಡ್ ರೇಸ ಹಂದಿಗಳನ್ನು ಪಾಲನೆ ಮಾಡಲಾಗುತ್ತದೆ.
ಆಸಕ್ತ ಹಂದಿ ಸಾಕಾಣಿಕೆದಾರರಿಗೆ ಕ್ಷೇತ್ರದಲ್ಲಿ ಬೆಳೆಸಿದ 3 ರಿಂದ 4 ತಿಂಗಳ ಶುದ್ಧ ಹಾಗೂ ಮಿಶ್ರತಳಿ ಹಂದಿ ಮರಿಗಳನ್ನು ರೋಗ ಮುಂಜಾಗ್ರತಾ ಲಸಿಕೆ ಹಾಗೂ ಜಂತುನಾಷಕ ಔಷಧಿಗಳನ್ನು ನೀಡಿದ ನಂತರ ಪಾಲನೆಗಾಗಿ ಇಲಾಖೆ ನಿಗದಿಪಡಿಸಿದ ದರಗಳಲ್ಲಿ ವಿತರಿಸಲಾಗುತ್ತದೆ.
ಕಿತ್ತೂರು ಕರ್ನಾಟಕ ಭಾಗದಲ್ಲಿ ಹಂದಿ ಸಾಕಾಣಿಕೆಗೆ ನಿರುದ್ಯೋಗ ಯುವಕ ಮತ್ತು ಯುವತಿಯರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದು, ಆನೇಕ ಹಂದಿ ಫಾರ್ಮಗಳು ಪ್ರಾರಂಭವಾಗಿದ್ದು ಹಂದಿಮರಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಬೇಡಿಕೆಯನ್ನು ಪೂರೈಸಲು ನಮ್ಮ ಹಂದಿ ಉತ್ಪಾದನಾ ಘಟಕದಲ್ಲಿ ಮಾತೃ ಹಂದಿಗಳ ಸಾಮಥ್ರ್ಯ ಹೆಚ್ಚಿಸಿ ಹಂದಿಮರಿಗಳನ್ನು ಉತ್ಪಾದಿಸಿ ಆಸಕ್ತರಿಗೆ ನೀಡಿದಲ್ಲಿ ನಿರುದ್ಯೋಗಿ ಯುವಕರಿಗೆ ಪ್ರೋತ್ಸಾಹ ನೀಡುವಂತಾಗಿ ಅವರ ಆರ್ಥಿಕ ಉತ್ಪನ್ನವನ್ನು ಹೆಚ್ಚಿಸಿಬಹುದು. ಆದ್ದರಿಂದ ಮಾತೃ ಹಂದಿಗಳ ಪಾಲನೆಗಾಗಿ 2 ಹೆಚ್ಚುವರಿ ಹಂದಿ ಶೆಡ್ಡ್‍ಗಳನ್ನು ಅನುದಾನದ ಲಭ್ಯತೆಯ ಅನುಗುಣವಾಗಿ ನಿರ್ಮಿಸಲಾಗುತ್ತದೆ.
ಈ ಸಂದರ್ಭದಲ್ಲಿ ಕೇಂದ್ರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳು ಮತ್ತು ಎಮ್ಮೆ ತಳಿ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ. ಬಸವರಾಜ ಸಿ. ನರೇಗಲ್, ಮುಖ್ಯ ಪಶುವೈದ್ಯಾಧಿಕಾರಿ ಡಾ.ಅನೀಲ್ ಕುಮಾರ ಶೀಲವಂತಮಠ, ಜಾನುವಾರು ಅಭಿವೃದ್ಧಿ ಅಧಿಕಾರಿ ವಾಯ್.ವಾಯ್.ಹರಿಜನ, ಪಶುವೈದ್ಯಕೀಯ ಪರೀಕ್ಷಕರು ಪ್ರಭಾವತಿ ಹೆಬ್ಬಳ್ಳಿ, ಪ್ರಥಮ ದರ್ಜೆ ಸಹಾಯಕ ಸೈಫ್‍ವುದ್ದೀನ ಮಾಜರಿ ಹಾಗೂ ಸಿಬ್ಬಂದಿವರು ಉಪಸ್ಥಿತರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						