ಚಿಕ್ಕಮಗಳೂರು: ಅಪರಿಚಿತ ವ್ಯಕ್ತಿಗಳಿಂದ ವಿಧಾನಪರಿಷತ್ ಸದಸ್ಯ (MLC) ಸಿ.ಟಿ ರವಿ ಅವರ ಮನೆಗೆ ಜೀವ ಬೆದರಿಕೆ ಪತ್ರ ಬಂದಿದ್ದು, ಈ ಕುರಿತು ರವಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪತ್ರದಲ್ಲಿ ’ರವಿ ನಮ್ಮ ತಂಡ ಬೆಳಗಾಮ್ ಇಂದ ಚಿಕ್ಕಮಗಳೂರಿಗೆ ನಿನ್ನ ಹುಡುಕಿಕೊಂಡು ಬಂದಿದೆ. ನಿನಗೆ ಒಂದು ಚುನೇತಿ ಏನೆಂದರೆ 15 ದಿವಸದ ಒಳಗೆ ನಮ್ಮ ಬೆಳಗಾಮ್ ಅಭಿನೇತ್ರಿಯವರ ಕಾಲನ್ನು ಹಿಡಿದು Sorry ಕೇಳಬೇಕು.
ಇಲ್ಲದಲ್ಲಿ ನಿನ್ನ ಗತಿ ಏನಾಗುತ್ತೆ. ನಿನ್ನ ಮನೆಗೆ ನುಗ್ಗಿ, ನಿನ್ನ ಕೈ ಮತ್ತು ಪಾದ ಮುರಿಯೋದು ಖಂಡಿತ, ಹುಷಾರ್! ನೀನು ಯಾವ ಪಾತಾಲದಲ್ಲಿ ಇದ್ದರೂ ನಿನ್ನನ್ನು ಬಿಡುವುದಿಲ್ಲ… ಹುಷಾರ್! ನಿನ್ನ ಮಗನ ಜೀವನಕ್ಕೂ ಅಪಾಯವಿದೆ’ ಎಂದು ಬರೆಯಲಾಗಿದ್ದು, ಇದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಸಿಟಿ ರವಿ ಕೊಲೆ ಬೆದರಿಕೆ ವಿರುದ್ಧ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿ.ಟಿ ರವಿ ಅವರ ಪಿ.ಎ ಚೇತನ್ ಅವರಿಂದ ದೂರು ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಇತ್ತೀಚೆಗೆ ಮುಕ್ತಾಯವಾದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಿಟಿ ರವಿ (CT Ravi) ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ದಾಖಲಿಸಿದ್ದರು.