ಪ್ರಯಾಗರಾಜ್: ಪವಿತ್ರ ಸ್ನಾನ ಮಾಡಲು ಮತ್ತು ಮಹಾಕುಂಭಮೇಳ (MahaKumbhMela2025) ರಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ನ ಸಂಗಮಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಯ ವೇಳೆಗೆ, 1 ಕೋಟಿಗೂ ಹೆಚ್ಚು ಭಕ್ತರು ಈಗಾಗಲೇ ಪವಿತ್ರ ಸಂಗಮ ಪ್ರದೇಶದಲ್ಲಿ ಧಾರ್ಮಿಕ ಸ್ನಾನವನ್ನು ಮಾಡಿದ್ದಾರೆ.
ಇಲ್ಲಿಯ ಗಾಳಿಯು ಭಕ್ತಿ, ಕೀರ್ತನೆಗಳು ಮತ್ತು ಆಧ್ಯಾತ್ಮಿಕತೆಯಿಂದ ತುಂಬಿದೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಮಹಾ ಕುಂಭಮೇಳವು ಉತ್ತರ ಪ್ರದೇಶದ ಗಂಗಾ, ಯಮುನ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಸೋಮವಾರ ಅಧಿಕೃತವಾಗಿ ಪ್ರಾರಂಭವಾಗಿದೆ.
ಘನಘೋರ ತಾಪಮಾನದ ನಡುವೆಯೂ ಕೋಟಿಗಟ್ಟಲೆ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.
ಆಧ್ಯಾತ್ಮಿಕ ಉತ್ಸಾಹದ ನಡುವೆ ಮೇಳದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸಾಧು ಒಬ್ಬರನ್ನು ಸಂದರ್ಶನ ಮಾಡಲು ಹೋದ ಖಾಸಗಿ ನ್ಯೂಸ್ ಚಾನಲ್ ವರದಿಗಾರರನ್ನು ಬಾಬಾಗಳು ಹೊಡೆದು ಕಳುಹಿಸಿದ್ದಾರೆ.
ವರದಿಗಳ ಪ್ರಕಾರ ಖಾಸಗಿ ನ್ಯೂಸ್ ಚಾನೆಲ್ ವರದಿಗಾರ ಸಾಧುಗೆ ಪದೇ ಪದೇ ತರಲೆ ಪ್ರಶ್ನೆಗಳನ್ನು ಕೇಳಿದ್ದಾನೆ. ಇದರಿಂದ ಕೆರಳಿದ ಬಾಬಾ ತಮ್ಮ ಕೈಯಲ್ಲಿದ್ದ ಕೋಲಿನಿಂದ ವರದಿಗಾರರ ಥಳಿಸಿ ಅಲ್ಲಿಂದ ಓಡಿಸಿದ್ದಾರೆ.
ಹಲವು ನೆಟ್ಟಿಗರಿಗೆ ಈ ಘಟನೆಗಳು ಕಾಮಿಡಿಯಾಗಿ ಕಾಣಿಸಿಕೊಂಡಿದ್ದರೂ ಇನ್ನೂ ಕೆಲವರು ಗಂಭೀರವಾಗಿ ಪರಿಗಣಿಸಿದ್ದಾರೆ.
ಒಬ್ಬ ನೆಟ್ಟಿಗ, ನೀವು ಸಾಧುವನ್ನು ಮೂರ್ಖ ಪ್ರಶ್ನೆಗಳೊಂದಿಗೆ ಕೆರಳಿಸಿದರೆ ಹೀಗೆಯೇ ಆಗುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಸಾಧುಗಳ ಸ್ಥಾನವನ್ನು ಗೌರವಿಸಿ, ಎಲ್ಲವೂ ಕಂಟೆಂಟ್ ಆಗುವುದಿಲ್ಲ ಎಂದಿದ್ದಾರೆ.
ಇದರ ನಡುವೆ ಈ ವಿಡಿಯೋಗಳನ್ನು ಕೆಲ ಖಾಸಗಿ ನ್ಯೂಸ್ ಚಾನಲ್ ವರದಿಗಾರರು ಶೇರ್ ಮಾಡಿ, ಯೂಟಬರ್ಗಳ ತಲೆ ಕಟ್ಟಲು ಪ್ರಯತ್ನ ನಡೆಸಿದ್ದಾರೆ ಎಂದು ವರದಿಯಾಗಿದೆ.