ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕ್ಕೇರಿದ್ದು, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರವಾಸವನ್ನು ಪ್ರಶ್ನಿಸಿದಕ್ಕೆ, ವಿಜಯೇಂದ್ರ ವಾರ್ನಿಂಗ್ ನೀಡಿದರೆ, ಮತ್ತೊಂದೆಡೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಸೇರಲು ಪ್ರೀತಂ ಗೌಡ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಪಕ್ಷಕ್ಕಾಗೋ..? ಮಗನಿಗಾಗೋ..?
ಇಂದು ಬೆಳಗಾವಿಯಲ್ಲಿ ಮಾತನಾಡಿರುವ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಂಡಿರುವ ವಿಚಾರ ಕುರಿತು, ಮಗನ ಸ್ಥಾನ ಭದ್ರ ಮಾಡೋಕೆ ಮಾಡ್ತಿದಾರಾ? ಅಥವಾ ಪಕ್ಷ ಭದ್ರ ಮಾಡೋಕೆ ರಾಜ್ಯ ಪ್ರವಾಸ ಮಾಡುತ್ತಿದ್ದಾರಾ ಅದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ. ಯಡಿಯೂರಪ್ಪರವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ.
ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಸ್ವಾಗತ.ಆದರೆ ಯಾಕೆ ಪ್ರವಾಸ ಮಾಡುತ್ತಿದ್ದಾರೆ ಅದನ್ನ ಸ್ಪಷ್ಟಪಡಿಸಬೇಕು. ಮಗನ ಸ್ಥಾನ ಭದ್ರ ಮಾಡೋಕೆ ಮಾಡ್ತಿದಾರಾ? ಪಕ್ಷ ಭದ್ರ ಮಾಡೋಕೆ ಮಾಡ್ತಿದಾರಾ ಅದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಯಡಿಯೂರಪ್ಪರವರೇ ನಿಮ್ಮ ಬಗ್ಗೆ ಗೌರವ ಇದೆ, ವಯಸ್ಸಾಗಿದೆ ಪಕ್ಷ ಎಲ್ಲ ನಿಮಗೆ ಕೊಟ್ಟಿದೆ ದಯವಿಟ್ಟು ಪಕ್ಷವನ್ನು ಬ್ಲ್ಯಾಕ್ ಮೇಲ್ ಮಾಡಬೇಡಿ! ವಿಜಯೇಂದ್ರ ಬೆನ್ನು ಹತ್ತಿದ್ರೆ ನೀವೂ ಹಾಳಾಗುತ್ತೀರಿ! ಮಗನಾಗಿ ನೋಡಬೇಡಿ, ಫೇಲಾದ ಅಧ್ಯಕ್ಷ ಅಂತಾ ನೋಡಿ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಹಕಾರ ಕೊಡಿ ಎಂದರು.
ಬಾಯಿ ಹಿಡಿತದಲ್ಲಿಟ್ಟುಕೊಳ್ಳಬೇಕು; ವಿಜಯೇಂದ್ರ ವಾರ್ನಿಂಗ್
ಇದಕ್ಕೆ ಕೊಪ್ಪಳದಲ್ಲಿ ವಾರ್ನಿಂಗ್ ನೀಡಿರುವ BJP ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ‘ಬಿ.ಎಸ್. ಯಡಿಯೂರಪ್ಪ ಅವರು ಹಳ್ಳಿಹಳ್ಳಿಗಳಲ್ಲಿ ಸುತ್ತಾಡಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದಾರೆ.
ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದಿರುವ ರಮೇಶ್ ಜಾರಕಿಯೊಳಿ ಯಡಿಯೂರಪ್ಪ ಅವರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
ರಮೇಶ್ ಜಾರಕಿಯೊಳಿ ಬಾಯಿ ಹಿಡಿತದಲ್ಲಿಟ್ಟುಕೊಳ್ಳಬೇಕು. ಅವರಿಗೆ ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಲಿ, ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ.
ಬಹಿರಂಗವಾಗಿ ಮಾತನಾಡುವುದರಿಂದ ಯಡಿಯೂರಪ್ಪ ಅವರ ಲಕ್ಷಾಂತರ ಅಭಿಮಾನಿಗಳಿಗೆ ನೋವಾಗುತ್ತದೆ. ಕಾರ್ಯಕರ್ತರು ಅಸಮಾಧಾನಗೊಂಡರೆ ರಮೇಶ ಓಡಾಡುವುದೇ ಕಷ್ಟವಾಗುತ್ತದೆ’ ಎಂದರು. ಅವರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ. ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವು ಸರಿಹೋಗುತ್ತದೆ ಎಂದು ಹೇಳಿದರು.
‘ರಾಜ್ಯಾಧ್ಯಕ್ಷನಾದ ಬಳಿಕ ನಿರಂತರ ಹೋರಾಟ ಮಾಡುತ್ತಿದ್ದೇನೆ. ಅಲ್ಲೊಬ್ಬರು, ಇಲ್ಲೊಬ್ಬರು ಮನಬಂದಂತೆ ಮಾತನಾಡಿದರೆ ಅದಕ್ಕೆ ಉತ್ತರ ನೀಡುವಷ್ಟು ಸಮಯವಿಲ್ಲ. ಅನುದಾನದ ಕೊರತೆಯಿಂದ ಸದ್ಯದಲ್ಲಿಯೇ ಕಾಂಗ್ರೆಸ್ ಶಾಸಕ ಉಪವಾಸ ಮಾಡುವ ಪರಿಸ್ಥಿತಿ ಎದುರಾಗುತ್ತದೆ’ ಎಂದರು.
ಪಕ್ಷ ಬಿಡ್ತಾರಾ..! ಪ್ರೀತಂ ಗೌಡ
ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಹಾಸನದ ಮಾಜಿ ಶಾಸಕ ಪ್ರೀತಂಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಪ್ರೀತಂ ಗೌಡ ಆಪ್ತರೊಬ್ಬರು ಬಹಿರಂಗಪಡಿಸಿದ್ದು, ಇದು ಭಾರತೀಯ ಜನತಾ ಪಾರ್ಟಿಗೆ ದೊಡ್ಡ ಆಘಾತವಾಗಿದೆ. ಬಿಜೆಪಿಯ ಯುವ ಮುಖಂಡರಲ್ಲಿ ಪ್ರಮುಖರಾಗಿರುವ ಪ್ರೀತಂ ಗೌಡ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ನನಗೆ ಯಾವುದೇ ಭವಿಷ್ಯವಿಲ್ಲ ಎನ್ನುವ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಕೆಲ ದಿನಗಳಿಂದ ಬಿಜೆಪಿ ಕಾರ್ಯಕ್ರಮಗಳಲ್ಲಿ ಮತ್ತು ಬಿಜೆಪಿ ವೇದಿಕೆಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಬಿಜೆಪಿಯ ಯುವ ಮುಖಂಡರಲ್ಲಿ ಒಬ್ಬರಾಗಿರುವ ಪ್ರೀತಂ ಜೆ ಗೌಡ ಚಾಲ್ತಿಯಲ್ಲಿರುವ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಸರಿಯಾದ ಯಾವುದೇ ಭವಿಷ್ಯವಿಲ್ಲ ಎಂದು ಕ್ರಮೇಣ ಪಕ್ಷದಿಂದ ಹಿಂದೆ ಸರಿಯುತ್ತಿದ್ದಾರೆಂದು ಹೇಳಲಾಗಿದೆ.
ಒಟ್ಟಾರೆ ಬಿಜೆಪಿಯಲ್ಲಿನ ಬಣ ಬಡಿದಾಟ ಬೀದಿಗೆ ಬಿದ್ದಿದ್ದು, ಶೀಘ್ರದಲ್ಲೇ ಪ್ರೀತಂ ಗೌಡ ರೀತಿಯಲ್ಲಿಯೇ ಹಾಲಿ BJP ಶಾಸಕ ಕೂಡ ಡಿಸಿಎಂ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಬೆಳವಣಿಗೆ ಕಾದು ನೋಡಬೇಕಿದೆ.