ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ (BJP) ಆಂತರಿಕ ಭಿನ್ನಮತದಿಂದ ಕಾರ್ಯಕರ್ತರು ಕಂಗಾಲಾಗಿ ಹೋಗಿದ್ದಾರೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನಿಲುವಿನ ವಿರುದ್ದ ಬಣ ಬಡಿದಾಟಕ್ಕೆ ಕೇಸರಿ ನಾಯಕರು ಚದುರಿಹೋಗಿದ್ದಾರೆ.
ಈ ನಡುವೆ ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆಯಿದೆ. ಬಹುಶಃ ಯಾವುದೇ ರಾಜಕೀಯ ಪಕ್ಷದಲ್ಲಿ ಇದು ಇಲ್ಲ. ವ್ಯವಸ್ಥಿತವಾಗಿ ಸಂಘಟನೆ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ.
ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ಚುನಾವಣೆ ನಡೆಯುತ್ತದೆ. ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ವ್ಯವಸ್ಥಿತವಾಗಿ ಕೇಂದ್ರದ ವರಿಷ್ಠರ ನಿರ್ಧಾರದಂತೆ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಮ್ಮೆಲ್ಲ ಪಕ್ಷದ ಹಿರಿಯರು, ಕಾರ್ಯಕರ್ತರ ಒಟ್ಟಾಗಿ ಭ್ರಷ್ಟ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ.
ನನಗೆ ವಿಶ್ವಾಸವಿದೆ, ಎಲ್ಲರ ಸಹಕಾರದಿಂದ ನಾನು ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ. ಪಕ್ಷವನ್ನು ಬಲಿಪಡಿಸುವ ಕೆಲಸ ಮಾಡುತ್ತೇನೆ.
ಜಿಲ್ಲಾಧ್ಯಕ್ಷಕ್ಕೆ ಪೈಪೋಟಿಯಂತೆಯೇ ರಾಜ್ಯಾಧ್ಯಕ್ಷಕ್ಕೂ ಕೂಡ ಕೆಲ ಹಿರಿಯರು ಅವರ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ವರಿಷ್ಠರು ಗಮನಿಸುತ್ತಿದ್ದಾರೆ. ಎಲ್ಲವೂ ಸುಖಾಂತ್ಯವಾಗಲಿದೆ.
ಎಲ್ಲವೂ ಏನ್ ಏನ್ ಡ್ಯಾಮೇಜ್ ಆಗಬೇಕೋ ಸಾಕಷ್ಟು ಆಗಿದೆ. ಒಂದು ವಾರ, ಎಂಟತ್ತು ದಿನಗಳ ಬಳಿಕ ರಾಜ್ಯಾಧ್ಯಕ್ಷ ಯಾರಾಗ್ತಾರೆ ಎಂಬ ಉತ್ತರ ಸಿಗುತ್ತೆ ಬಳಿಕ ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
ನಾನು ಯಾವ ರೀತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂಬುದು ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ ಗೊತ್ತಿದೆ. ನಾನು ರಾಜ್ಯದ ಬಿಜೆಪಿ ಅಧ್ಯಕ್ಷನಾಗುತ್ತೇನೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.