ವಿಜಯಪುರ: ರಾಜ್ಯ ಬಿಜೆಪಿಯಲ್ಲಿನ (BJP) ಬಣ ಬಡಿದಾಟ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಲಕ್ಷಣಗಳು ಕಂಡುಬರುತ್ತಿದ್ದು, ಕೇಂದ್ರದ (BJP) ವರಿಷ್ಠರು ಭ್ರಷ್ಟ ಮತ್ತು ಕುಟುಂಬ ರಾಜಕಾರಣಕ್ಕೆ ಜೈ ಅಂತಾರೋ, ನಿಷ್ಠಾವಂತ ಹಿಂದುತ್ವ ನಾಯಕತ್ವಕ್ಕೆ ಜೈ ಅಂತಾರೋ ನೋಡ್ತಿವಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಕಹಳೆ ಮೊಳಗಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನಮ್ಮ ಗುಂಪು ಈಗ ದೊಡ್ಡದಾಗಿದೆ. ಯಡಿಯೂರಪ್ಪ (Yediyurappa), ಅವರ ಮಗನ ಕರ್ಮಕಾಂಡ ಬಿಚ್ಚಿಡಲು ದೆಹಲಿಗೆ ಹೊರಟಿದ್ದೇವೆ.
ಮಹಾ ಭ್ರಷ್ಟ ಕುಟುಂಬ ಬೇಕೆ..? ಪ್ರಾಮಾಣಿಕರು.. ನಿಷ್ಠಾವಂತ ಕಾರ್ಯಕರ್ತರು ಬೇಕೆ..?. ಒಂದು ಬಿಜೆಪಿಲಿ (BJP) ಕುಟುಂಬ ಶಾಹಿ ಕೊನೆಯಾಗಬೇಕು, ಭ್ರಷ್ಟಾಚಾರ ಕುಟುಂಬ ಈ ರಾಜ್ಯದಿಂದ ಕಿತ್ತೊಗೆಯಬೇಕು, ಹಿಂದುತ್ವ ಇರುವಂತ ವ್ಯಕ್ತಿಗಳ ಕೈಗೆ ನಾಯಕತ್ವ ಕೊಡಬೇಕು ಎಂದರು.
ನಾನೇ ರಾಜ್ಯಾಧ್ಯಕ್ಷನಾಗುವೆ ಎಂದಿರುವ ವಿಜಯೇಂದ್ರ ಭರವಸೆ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿ, ಡಿಪಾಸೀಟ್ ಹೋಗೋನ್ ಕೂಡ ನಾನೇ ಆರಿಸಿ ಬರ್ತೀನಿ ಅಂತಾನೆ.
ಷರತ್ತು..
ಬಿಜೆಪಿ ಹೈಕಮಾಂಡ್ ಮೂರು ವಿಷಯ ಸ್ಪಷ್ಟ ಮಾಡಬೇಕಿದೆ.. ಭ್ರಷ್ಟಾಚಾರ ವ್ಯಕ್ತಿ ಕುಟುಂಬವನ್ನ ಬಿಜೆಪಿಯಿಂದ ದೂರ ಇಡಬೇಕು, ಕುಟುಂಬ ರಾಜಕಾರಣದಿಂದ ಬಿಜೆಪಿಯನ್ನ ದೂರ ಇಡಬೇಕು, ಹಿಂದುತ್ವ ರಹಿತ ನಾಯಕತ್ವ ಬಿಜೆಪಿಗೆ ಬೇಕಾಗಿಲ್ಲ ಸಾಕಿನ್ನ.
ಯಾವ ಹಿಂದುತ್ವ ರಕ್ಷಣೆ ಮಾಡ್ಲಿಲ್ಲ, ಹಿಂದೂಗಳ ಕೊಲೆಯಾದರೆ ಕಠಿಣ ಕ್ರಮ ಅಂದಿದ್ ಬಿಟ್ರೆ ಏನು ಆಗ್ಲಿಲ್ಲ ಅದಕ್ಕೆ ಈ ರಾಜ್ಯದಲ್ಲಿ ಬಿಜೆಪಿಗೆ ಹೀನಾಯ ಸ್ಥಿತಿ ಆಯ್ತು, ಅದಕ್ಕೆ ಕಾರಣ ಹಿಂದುತ್ವ ರಹಿತ ರಾಜಕಾರಣ ಎಂದು ಗುಡುಗಿದರು.
ರಾಜ್ಯಾಧ್ಯಕ್ಷನಾಗಿ ವಿಜಯೇಂದ್ರ (Vijayendra) ಮುಂದುವರಿದರೆ ಕರ್ನಾಟಕದಲ್ಲಿ ಪಕ್ಷಕ್ಕೆ ಹೀನಾಯ ಸ್ಥಿತಿ ಬರಲಿದೆ. ಮೊನ್ನೆ ವಿಜಯೇಂದ್ರನಿಗೆ ಬಗ್ಗೆ ಹೀನಾಯವಾಗಿ ಬೈದರೂ ಅವನು ಉತ್ತರ ಕೊಡಲಿಲ್ಲ ಎಂದು ಲೇವಡಿ ಮಾಡಿದರು.
ಅಪ್ಪ-ಮಗನಿಗೆ ಡಿಕೆ ಶಿವಕುಮಾರ್ ಅವರು ಭಯಪಡಿಸಿದ್ದಾರೆ. ನಮ್ಮ ಹಗರಣ ಹೊರತೆಗೆದರೆ, ನಿಮ್ಮ ಪೋಕ್ಸೋ ಕೇಸ್ ಇದೆ, ನಕಲಿ ಸಹಿ ಮಾಡಿರುವ ಬಗ್ಗೆ ಹೊರತೆಗೆಯುತ್ತೇವೆ ಅಂತಾ ಡಿಕೆ ಶಿವಕುಮಾರ್ (DK Shivakumar) ಹೆದರಿಸಿದ್ದಾಗಿ ಯತ್ನಾಳ್ ಆರೋಪಿಸಿದರು.
ಹೀಗಾಗಿ ನಮ್ಮ ಪಕ್ಷಕ್ಕೆ ಇಂತಹವರು ಬೇಡ ಎಂದು ವಿವರಿಸಲು ಹೈಕಮಾಂಡ್ ಬಳಿಗೆ ಹೋಗುತ್ತಿದ್ದೇವೆ ಎಂದು ಪುನರುಚ್ಚರಿಸಿದರು.