ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ 15ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ (Aero India 2025) ಸಕಲ ಸಿದ್ದತೆ ನಡೆದಿದ್ದು, ಸೋಮವಾರ ಬೆಳಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಉದ್ಘಾಟನೆಯಿಂದ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ.
ಸುಮಾರು ನೂರು ದೇಶಗಳ ಪ್ರತಿನಿಧಿಗಳು, ಅಮೆರಿಕ, ರಷ್ಯಾ, ಐರೋಪ್ಯ ರಾಷ್ಟ್ರಗಳ ಅತ್ಯಾಧುನಿಕ ಯುದ್ಧ ವಿಮಾನಗಳಿಂದ ಪ್ರದರ್ಶನ ಹಾಗೂ ಭಾರತದ ವಾಯುಪಡೆಯ ಬಲಪ್ರದರ್ಶನಕ್ಕೆ (Aero India 2025) ವೇದಿಕೆ ಸಜ್ಜಾಗಿದೆ.
ಒಂದೆಡೆ ಸೋಮವಾರದಿಂದ ಲೋಹದ ಹಕ್ಕಿಗಳ ಕಲರವ, ಇನ್ನೊಂದೆಡೆ ರಾಜ್ಯಕ್ಕೆ ಕೈಗಾರಿಕೋದ್ಯಮಿ ಗಳನ್ನು ಸೆಳೆಯುವ ನಿಟ್ಟಿನಲ್ಲಿ ಮಂಗಳವಾರದಿಂದ ಹೂಡಿಕೆದಾರರ ಸಮ್ಮೇಳನ. ಈ ಎರಡೂ ಸಮಾವೇಶಗಳು ಜತೆಜತೆಗೆ ನಡೆಯುತ್ತಿರುವುದು ಕರ್ನಾಟಕದ ಪಾಲಿಗೆ ‘ಲಾಭ’ವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಐದು ದಿನಗಳ ಕಾಲ ನಡೆಯುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಈ ಬಾರಿ ಹಲವು ದಾಖಲೆಗಳ ನಿರೀಕ್ಷೆಗಳನ್ನು ಹುಟ್ಟಿಸಿದೆ. ಬೃಹತ್ ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದ್ದು, ಏರ್ ಶೋಗೆ ದೇಶ, ವಿದೇಶದ ಗಣ್ಯರು ಆಗಮಿಸಲಿದ್ದಾರೆ.
ದೇಶ, ವಿದೇಶದ ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಮೋಡಿ ಮಾಡಲು ತುದಿಗಾಲಲ್ಲಿ ನಿಂತಿವೆ. ಈಗಾಗಲೇ 700ಕ್ಕೂ ಪ್ರದರ್ಶಕರು ನೋಂದಣಿ ಮಾಡಿಕೊಂಡಿದ್ದು, ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲು ತಯಾರಿ ನಡೆಯುತ್ತಿದೆ.
ಏರ್ ಶೋನಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಪಾಲಿಕೆ, ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.
ಟಿಕೆಟ್ ಪಡೆಯುವುದು ಹೇಗೆ?
ಏರೋ ಇಂಡಿಯಾ ಪ್ರದರ್ಶನದ ಮೊದಲ 3 ದಿನ ಎಕ್ಸಿಬಿಷನ್ ಹಾಗೂ ಮಳಿಗೆಗಳ ಭೇಟಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಆದರೆ ವೈಮಾನಿಕ ಪ್ರದರ್ಶನದ ಭೇಟಿಗೆ ಅವಕಾಶ ನೀಡಲಾಗಿದೆ.
ವೈಮಾನಿಕ ಪ್ರದರ್ಶನದ ವೀಕ್ಷಣೆಗೆ ಒಂದು ಸಾವಿರ ರು. ನಿಗದಿಯಾಗಿದೆ. ಮಳಿಗೆಗಳ ಭೇಟಿಗೆ 2500 ರು. ಶುಲ್ಕ ನಿಗದಿಪಡಿಸಲಾಗಿದೆ. ಟಿಕೆಟ್ ಇಲ್ಲಿ ಲಭ್ಯವಿದೆ: www.aeroindia.gov.in