ಲತೇಹಾರ್: ಉತ್ತರಪ್ರದೇಶ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಿಂದ (Maha Kumbhamela) ಹಿಂತಿರುಗುತ್ತಿದ್ದಾಗ ಜೆಎಂಎಂ ಸಂಸದೆ ಮಹುವಾ ಮಜಿ ಅವರ ಕಾರು ಅಪಘಾತ ಸಂಭವಿಸಿದ್ದು, ಸಂಸದೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿ ತಮ್ಮ ಕುಟುಂಬದ ಜೊತೆ ವಾಪಸ್ ಆಗುತ್ತಿದ್ದ ವೇಳೆ ಲತೇಹಾರ್ ಜಿಲ್ಲೆಯ ಹೊಟ್ವಾಗ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಟ್ರಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಮಹುವಾ ಮಜಿ ಮೂಳೆ ಮುರಿತ ಉಂಟಾಗಿದ್ದು, ಅವರನ್ನು ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಸದ್ಯ ಕಾರಿನಲ್ಲಿದ್ದ ಅವರ ಕುಟುಂಬ ಸದಸ್ಯರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ.