ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ “ಸ್ಮಾರ್ಟ್ ಮೀಟರ್” ಹೆಸರಲ್ಲಿ 15 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆಸಿದೆ. KTTP ಕಾಯ್ದೆಯನ್ನು ಉಲ್ಲಂಘಿಸಿ, ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ ನಡೆಸಿ ಸಾವಿರಾರು ಕೋಟಿ ಲೂಟಿ ಮಾಡಿದೆ, ಕೂಡಲೇ ಸಚಿವ ಕೆ.ಎ ಜಾರ್ಜ್ ರಾಜೀನಾಮೆ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ (JDS) ಘಟಕದಿಂದ ಪ್ರತಿಭಟನೆ ನಡೆಸಿ, ರಾಜೀನಾಮೆಗೆ ಆಗ್ರಹಿಸಿದರು.
ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್‌ನಲ್ಲಿ ಬೃಹತ್ ಹಗರಣ ಹಾಗೂ ಸಚಿವ ಕೆ.ಎ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಿದ ಬೆಂಗಳೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಇಂಧನ ಸಚಿವ ಕೆಜೆ ಜಾರ್ಜ್ ಮನೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಆದರೆ, ಜೆಡಿಎಸ್ ಕಚೇರಿ ಬಳಿಯೇ ಮುನೇಗೌಡ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು, ಮುಖಂಡರನ್ನ ಪೊಲೀಸರು ತಡೆದು, ವಶಕ್ಕೆ ಪಡೆದರು.

ಗ್ಯಾರಂಟಿ ನೀಡಿ ಹಗಲು ದರೋಡೆ
ಈ ವೇಳೆ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಬಿ.ಮುನೇಗೌಡ ಅವರು ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡಿ ದರೋಡೆಗೆ ಇಳಿದಿದೆ. ಸ್ಮಾರ್ಟ್ ಮೀಟರ್ ವಿಚಾರವಾಗಿ ಜನರ ತೆರಿಗೆ ದುಡ್ಡನ್ನು ಲೂಟಿ ಹೊಡೆಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದರ ತನಿಖೆ ಆಗಿ ಸತ್ಯಾಂಶ ಹೊರಬರಬೇಕು.
ಪ್ರತಿಭಟನೆ ಮಾಡುವ ಮುನ್ನವೇ ವಶಕ್ಕೆ ಪಡೆದಿದ್ದಾರೆ ಇದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಸ್ಮಾರ್ಟ್ ಮೀಟರ್” ಹೆಸರಲ್ಲಿ 15 ಸಾವಿರ ಕೋಟಿಗೂ ಹಣವನ್ನ ತಿಂದು ಹಾಕುವ ಕೆಲಸ ಮಾಡುತ್ತಿದ್ದಾರೆ. 15 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹುಸ್ಕೂರು ಆನಂದ್, ಟಿಎಪಿಎಂಸಿಎಸ್ ಉಪಾಧ್ಯಕ್ಷ ಲಕ್ಷ್ಮೀನಾರಾಯಣ್, ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ವಕೀಲರಾದ ಮುರುಳೀಧರ್, ವಕ್ತಾರರಾದ ಕುಂಟನಹಳ್ಳಿ ಮಂಜುನಾಥ್ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅನೇಕ ಮುಖಂಡರು ಭಾಗಿಯಾಗಿದ್ದರು.