ನವದೆಹಲಿ: ಭಾರತೀಯ ಸೇನೆ ನಡೆಸಿದ ಅಪರೇಷನ್ ಸಿಂಧೂರ (Operation Sindoora) ದಾಳಿಗೆ ತತ್ತರಿಸಿದ ಪಾಪಿ ಪಾಕಿಸ್ತಾನ, ಮಹಾಪ್ರಭು ರಕ್ಷಿಸಿ.. ಎಂಬಂತೆ ಅಮೇರಿಕಾಗೆ ಮೊರೆಯಿಟ್ಟ ಹಿನ್ನೆಲೆಯಲ್ಲಿ, ದೊಡ್ಡಣ್ಣ ಅಧ್ಯಕ್ಷತೆಯಲ್ಲಿ ನಿನ್ನೆ ರಾತ್ರಿ ನಡೆದ ಸುದೀರ್ಘ ಸಂಧಾನ ಸಭೆ ಯಶಸ್ವಿಯಾಗಿದೆ.
ಈ ಹಿನ್ನೆಲೆಯಲ್ಲಿ ಭಾರತ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂದು ಕಮಾಂಡರ್ ರಘು ಆರ್ ನಾಯರ್ ಅವರು ತಿಳಿಸಿದರು.
ಇಂದು ಸಂಜೆ ರಕ್ಷಣಾ ಸಚಿವಾಲಯ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿದೆಯಾದರೂ, ಭಾರತದ ಸಾರ್ವಭೌಮತ್ವ ರಕ್ಷಣೆಗೆ ಸೇನೆಯು ಸದಾ ಸಿದ್ಧವಾಗಿದೆ ಎಂದೂ ಬಾಲ ಬಿಚ್ಚಿದರೆ ಹುಷಾರ್ ಎಂಬಂತೆ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಮುಂದುವರಿದು ಮಾತನಾಡಿದ ಅವರು, ಪಾಕ್ ನ ಅಪ್ರಚೋದಿತ ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ನಮ್ಮ ಉತ್ತರದಿಂದ ಪಾಕ್‌ಗೆ ವ್ಯಾಪಕ ಹಾನಿ ಸಂಭವಿಸಿದೆ. ಉಗ್ರರ ಅಡಗು ತಾಣ, ಭಯೋತ್ಪಾದಕರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದರು.
ಕರುನಾಡ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಮಾತನಾಡಿ, ಪಾಕಿಸ್ತಾನವು ಕೇವಲ ಸುಳ್ಳು ಸುದ್ದಿಯ ಅಭಿಯಾನ ಮಾಡಿದೆ. ನಮ್ಮ ಎಸ್-400, F-17, ಬ್ರಹ್ಮಸ್ ಮೇಲೆ ದಾಳಿ ನಡೆಸಿ ಹಾನಿಗೊಳಿಸಲಾಗಿದೆ ಎಂದು ಪಾಕ್ ಸುಳ್ಳು ಹೇಳಿದೆ. ಪಾಕ್ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ನಮ್ಮ ಎಲ್ಲಾ ಸೇನಾ ನೆಲೆ ಮತ್ತು ವಾಯುನೆಲೆಗಳು ಸುರಕ್ಷಿತವಾಗಿವೆ. ಇನ್ನು ಭಾರತ ಎಂದಿಗೂ ಧರ್ಮಾಧಾರಿತ ದಾಳಿ ಮಾಡಲ್ಲ ಎಂದು ವಿವರಿಸಿದರು.
ವಿಂಗ್ ಕಮಾಂಡರ್ ವೋಮಿಕಾ ಸಿಂಗ್ ಮಾತನಾಡಿ, ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ. ಭಾರತದ ವಾಯು ನೆಲೆಗೆ ಹಾನಿ ಎಂದು ಪಾಕ್ ಸುಳ್ಳು ಹೇಳಿದೆ. ನಾಗರಿಕರನ್ನು ಗುರಿಯಾಗಿಸಿ ನಾವು ಯಾವ ಹಾನಿ ಮಾಡಿಲ್ಲ. ಭಾರತ ಜಾತ್ಯಾತೀತ ರಾಷ್ಟ್ರ ಯಾವುದೇ ಧಾರ್ಮಿಕ ಕೇಂದ್ರದ ಮೇಲೆ ದಾಳಿ ಮಾಡಿಲ್ಲ ಎಂದು ತಿಳಿಸಿದರು.