ದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಅಮಾನತು ಮಾಡಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹೊಸ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ನಿರ್ಧರಿಸಿದೆ.
ಎರಡೂ ರಾಷ್ಟ್ರಗಳ ನಡುವೆ ಪ್ರತೀಕಾರ ಸಮರ ಜೋರಾಗುತ್ತಿದಂತೆ ಭದ್ರತಾ ಕಾರಣಗಳಿಂದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಬಿಸಿಸಿಐ ಒಂದು ವಾರಗಳ ಕಾಲ ಸ್ಥಗಿತಗೊಳಿಸಿತ್ತು.
ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಪರಿಸ್ಥಿತಿ ನೋಡಿಕೊಂಡು ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಬಿಸಿಸಿಐ ಹೇಳಿದೆ.
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ಬಳಿಕ ಪಂದ್ಯ ಮುಂದುವರಿಯಲಿದೆಯೇ ಅಥವಾ ಅದಕ್ಕೂ ಮುನ್ನವೇ ಪಂದ್ಯ ನಡೆಯಲಿದೆಯೇ ಎನ್ನುವುದು ಸ್ಪಷ್ಟವಾಗಬೇಕಿದೆ.
ಪ್ರಸ್ತುತ 18ನೇ ಆವೃತ್ತಿಯ ಐಪಿಎಲ್ ಗುರುವಾರದ ಸ್ಥಗಿತಗೊಂಡ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸೇರಿ 58 ಪಂದ್ಯಗಳು ನಡೆದಿವೆ. ಇನ್ನೂ ನಾಲ್ಕು ಪ್ಲೇ ಆಫ್ ಪಂದ್ಯಗಳೂ ಸೇರಿ 16 ಪಂದ್ಯಗಳು ಬಾಕಿ ಇವೆ.
ಸದ್ಯ ಆಟಗಾರರು ತಮ್ಮ ತವರಿಗೆ ಮರಳಿದ್ದು ಅವರು ಮತ್ತೆ ತಂಡವನ್ನು ಸೇರಿಕೊಳ್ಳಲು ಕಾಲಾವಕಾಶ ನೀಡಬೇಕಾಗಿದೆ. ಉದ್ವಿಗ್ನತೆ ಶಮನವಾದ ಬಳಿಕ ಹೊಸ ದಿನಾಂಕಗಳನ್ನು ಪ್ರಕಟಿಸಲಿದೆ ಎಂದು ಬಿಸಿಸಿಐ ಐಪಿಎಲ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 9ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ಕೋ ಸೂಪರ್ ಜೈಂಟ್ ತಂಡಗಳ ನಡುವೆ ಹಣಾಹಣ ನಡೆಯಬೇಕಿತ್ತು.
ಪ್ಲೇ ಆಫ್ ಅಧಿಕೃತ ಪ್ರವೇಶಕ್ಕೆ ಆರ್ ಸಿಬಿಗೆ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಇನ್ನೊಂದು ಪಂದ್ರ ಮೇ 13ರಂದು ಬೆಂಗಳೂರಿನಲ್ಲಿ ನಿಗದಿಯಾಗಿದೆ. ಈ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಿರುವ ಕ್ರಿಕೆಟ್ ಪ್ರೇಮಿಗಳು ಪಂದ್ಯನಿಗದಿಯಂತೆ ನಡೆಯಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.