ದೊಡ್ಡಬಳ್ಳಾಪುರ: ಮೇ 25ರಂದು ನಡೆಯಲಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ನಿರ್ದೇಶಕ ಸ್ಥಾನದ ಚುನಾವಣೆಗೆ, ದೊಡ್ಡಬಳ್ಳಾಪುರ ಕ್ಷೇತ್ರದಿಂದ ಇಬ್ಬರು ಆನಂದರು ಮಾತ್ರ ಉಳಿದಿದ್ದಾರೆ.
ಹೌದು ಸೋಮವಾರವಾದ ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಕಾರಣ, ಸಲ್ಲಿಕೆಯಾಗಿದ್ದ 6 ನಾಮ ಪತ್ರಗಳಲ್ಲಿ ಉಳಿದ 4 ಮಂದಿ ನಾಮ ಪತ್ರಗಳನ್ನು ಹಿಂಪಡೆದಿದ್ದಾರೆ.
ಇದರ ಮೂಲಕ ಈ ಹಿಂದೆ ಕಾಂಗ್ರೆಸ್‌ನಿಂದ ಬಮೂಲ್ ನಿರ್ದೇಶಕರಾಗಿ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ಬಿಜೆಪಿ (BJP) ಬೆಂಬಲದ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಬಿ.ಸಿ.ಆನಂದಕುಮಾರ್ (BC Anand Kumar) ಅವರು ಕಣದಲ್ಲಿದ್ದಾರೆ.
ಇವರೊಂದಿಗೆ ಜೆಡಿಎಸ್ (JDS) ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿರುವ ಹುಸ್ಕೂರು ಆನಂದ್ (Huskur Anand) ಅವರು ಕಣದಲ್ಲಿ ಉಳಿದ ಮತ್ತೋರ್ವ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲ
ಪ್ರಸ್ತುತ ಕಾಂಗ್ರೆಸ್ ಆಕಾಂಕ್ಷಿಗಳು ನಾಮಪತ್ರಗಳನ್ನು ಹಿಂಪಡೆದಿರುವ ಕಾರಣ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಣಾಹಣಿ ನಡೆಯಲಿದ್ದು, ಈ ಹಿಂದೆ ಹರಿತಲೇಖನಿ ವರದಿ ಮಾಡಿದಂತೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ.
ಸುದ್ದಿಗೋಷ್ಠಿ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಮಲ-ದಳ ಮೈತ್ರಿ ಮುರಿದು ಬಿದ್ದಿರುವ ಕುರಿತು ಜೆಡಿಎಸ್ ಮುಖಂಡರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಕಾಂಗ್ರೆಸ್ ಮುಖಂಡರು ಕೂಡ ಬೆಂಬಲ ನೀಡುವ ಕುರಿತು ಇದೇ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
201 ಮಂದಿ ಮತದಾನ
ದೊಡ್ಡಬಳ್ಳಾಪುರ ತಾಲ್ಲೂಕಿನ ಐದು ಹೋಬಳಿಗಳ ಪೈಕಿ ಮಧುರೆ ಹೋಬಳಿ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಉಳಿದಂತೆ ತೂಬಗೆರೆ, ಕಸಬಾ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿ ದೊಡ್ಡಬಳ್ಳಾಪುರ ಬಮೂಲ್ ನಿರ್ದೇಶಕ ಕ್ಷೇತ್ರಕ್ಕೆ ಸೇರಿದೆ.
ನಿರ್ದೇಶಕ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕನ್ನು 201 ಜನ ಹೊಂದಿದ್ದಾರೆ. ತಾಲ್ಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಬ್ಬ ನಿರ್ದೇಶಕ ಅಥವಾ ಅಧ್ಯಕ್ಷರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.