ಬೆಂಗಳೂರು: ನಿರೀಕ್ಷಿಸಿದಂತೆ ಕನಕಪುರ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮಾಜಿ ಸಂಸದ ಡಿಕೆ ಸುರೇಶ್ (DK Suresh) ಅವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಮುಲ್ ನಿರ್ದೇಶಕ ಸ್ಥಾನಕ್ಕೆ ಕಡೆಯ ದಿನವಾದ ಶನಿವಾರ ಬೆಂಬಲಿಗರೊಂದಿಗೆ ಬಮೂಲ್ ಕಚೇರಿಗೆ ತೆರಳಿ ಡಿಕೆ ಸುರೇಶ್ (DK Suresh) ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರು.
ಇನ್ನು ಇತರೆ ಆಕಾಂಕ್ಷೆಗಳು ಸಲ್ಲಿಸಿದ್ದ ನಾಮಪತ್ರಗಳು ಅಮಾನ್ಯವಾಗಿರುವ ಕಾರಣಕ್ಕೆ ಇದೀಗ ಡಿಕೆ ಸುರೇಶ್ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಬಮುಲ್ ನಿರ್ದೇಶಕರಾಗಿ ಸುರೇಶ್ ಅವರು ಆಯ್ಕೆಯಾಗುವ ಮೂಲಕ ಕರ್ನಾಟಕ ಹಾಲು ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಹಾಗೂ ಕೆಎಂಎಫ್ ಅಧ್ಯಕ್ಷರಾಗಲು ಸನಿಹದಲ್ಲಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಕೆಎಂಎಫ್ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಸುರೇಶ್ ಅವರು, ಬೆಂಬಲ ಪಡೆಯುವ ನಿಟ್ಟಿನಲ್ಲಿ ಹಲವು ತಾಲ್ಲೂಕುಗಳಿಂದ ತಮ್ಮ ಬೆಂಬಲಿಗರನ್ನು ನಿರ್ದೇಶಕರನ್ನಾಗಿ ಮಾಡುವ ಕಡೆ ಗಮನಹರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಹಾಲು ಒಕ್ಕೂಟದ ಕನಕಪುರ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಈಗಾಗಲೇ ಸುರೇಶ್ ಅವರು ಹೇಳಿಕೆ ನೀಡಿದ್ದು ಗೊತ್ತೇ ಇದೆ.
ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ ಎಂದೂ ಸುರೇಶ್ ಅವರು ನಾಮಪತ್ರ ಸಲ್ಲಿಸಿದ್ದ ದಿನ ಹೇಳಿದ್ದರು.