ದೊಡ್ಡಬಳ್ಳಾಪುರ: ಮೇ 25ರಂದು ನಡೆಯಲಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ನಿರ್ದೇಶಕ ಸ್ಥಾನದ ಚುನಾವಣೆಗೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಕಾರಣ, ದೊಡ್ಡಬಳ್ಳಾಪುರ ನಿರ್ದೇಶಕ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ 6 ನಾಮ ಪತ್ರಗಳಲ್ಲಿ 4 ಮಂದಿ ನಾಮ ಪತ್ರಗಳನ್ನು ಹಿಂಪಡೆದಿದ್ದಾರೆ.
ಇದರ ಮೂಲಕ ಬಿಜೆಪಿ ಬೆಂಬಲದ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಬಿ.ಸಿ.ಆನಂದಕುಮಾರ್ ಅವರು ಕಣದಲ್ಲಿದ್ದಾರೆ.
ಇನ್ನೂ ಜೆಡಿಎಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿರುವ ಹುಸ್ಕೂರು ಆನಂದ್ ಅವರು ಕಣದಲ್ಲಿ ಉಳಿದ ಮತ್ತೋರ್ವ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್ ಆಕಾಂಕ್ಷಿಗಳು ನಾಮಪತ್ರಗಳನ್ನು ಹಿಂಪಡೆದಿರುವ ಕಾರಣ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಣಾಹಣಿ ನಡೆಯಲಿದೆ.
ಕುತೂಹಲ ಕೆರಳಿಸಿರು ಬಿ.ಮುನೇಗೌಡರ ಸುದ್ದಿಗೋಷ್ಠಿ
ಈ ಬೆಳವಣಿಗೆ ಬೆನ್ನಲ್ಲೇ ಇಂದು (ಮೇ.20) ಮಧ್ಯಾಹ್ನ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ ಸೇರಿದಂತೆ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಮಲ-ದಳ ಮೈತ್ರಿ ಮುರಿದು ಬಿದ್ದಿರುವ ಕುರಿತು ಜೆಡಿಎಸ್ ಮುಖಂಡರು ಮಾತನಾಡುವ ಸಾಧ್ಯತೆ ಇದೆ.
ಅಲ್ಲದೆ ಕಾಂಗ್ರೆಸ್ ಮುಖಂಡರು ಬಮೂಲ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಕುರಿತು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಐದು ಹೋಬಳಿಗಳ ಪೈಕಿ ಮಧುರೆ ಹೋಬಳಿ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಉಳಿದಂತೆ ತೂಬಗೆರೆ, ಕಸಬಾ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿ ದೊಡ್ಡಬಳ್ಳಾಪುರ ಬಮೂಲ್ ನಿರ್ದೇಶಕ ಕ್ಷೇತ್ರಕ್ಕೆ ಸೇರಿದೆ.
ನಿರ್ದೇಶಕ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕನ್ನು 202 ಜನ ಹೊಂದಿದ್ದಾರೆ. ತಾಲ್ಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಬ್ಬ ನಿರ್ದೇಶಕ ಅಥವಾ ಅಧ್ಯಕ್ಷರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.