ರಾಜಾನುಕುಂಟೆ (ದೊಡ್ಡಬಳ್ಳಾಪುರ): ದಂಪತಿಗಳು ಬೈಕ್ನಲ್ಲಿ ಹೋಗುವಾಗ ಹಿಂಬದಿ ಮತ್ತೊಂದು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಹಾಡುಹಗಲೇ ಮಹಿಳೆಯ ಕೊರಳಲ್ಲಿದ್ದ 45 ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರವನ್ನು (Gold wedding chain) ಕಸಿದು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ-ಯಲಹಂಕ ನಡುವಿನ ಮಾರಸಂದ್ರ (Marasandra) ಅಪಾರ್ಟ್ಮೆಂಟ್ ಬಳಿ ನಡೆದಿದೆ.
ದೊಡ್ಡಬಳ್ಳಾಪುರ ನಗರದ ಕಲ್ಲುಪೇಟೆ ನಿವಾಸಿಗಳಾದ ರಮೇಶ್ ದಂಪತಿಗಳು ಅನಾರೋಗ್ಯದ ಹಿನ್ನೆಲೆ ಮಂಗಳವಾರ ಮಧ್ಯಾಹ್ನ ರಾಜಾನುಕುಂಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ದೊಡ್ಡಬಳ್ಳಾಪುರಕ್ಕೆ ಹಿಂತಿರುಗಿ ಬರುವ ವೇಳೆ ಈ ಕೃತ್ಯ ನಡೆದಿದೆ.
ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಇಬ್ಬರು ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿಕೊಂಡು ದುಷ್ಕರ್ಮಿಗಳು ದಂಪತಿಗಳ ಬೈಕ್ ಹಿಂಬಾಲಿಸಿಕೊಂಡು ಬಂದು, ರೈಡಿಂಗ್ನಲ್ಲಿದ್ದಂತೆ ಹಿಂಬದಿ ಕುಳಿತಿದ್ದ ಮಹಿಳೆಯ ಕೊರಳಲ್ಲಿದ್ದ ಸುಮಾರು 5 ಲಕ್ಷ ಬೆಲೆ ಬಾಳುವ, 45 ಗ್ರಾಂ. ತೂಕದ ಚಿನ್ನದ ಸರವನ್ನು ಕಸಿದುಕೊಂಡು ದೊಡ್ಡಬಳ್ಳಾಪುರದ ಕಡೆಗೆ ಪರಾರಿಯಾಗಿದ್ದಾರೆ.
ಈ ವೇಳೆ ಆಯತಪ್ಪಿ ನೆಲಕ್ಕೆ ಬಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತಂತೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.