ಬೆಂಗಳೂರು; ಸದನದಲ್ಲಿ ಅನುಚಿತ ವರ್ತನೆಯ ಕಾರಣ ಅಮಾನತ್ತಾಗಿದ್ದ ಬಿಜೆಪಿಯ (BJP) 18 ಶಾಸಕರ ಬಿಗ್ ರಿಲೀಫ್ ದೊರೆತಿರುವ ಮಾಹಿತಿ ಲಭ್ಯವಾಗಿದೆ.
ಮಾರ್ಚ್ 21 ರಂದು ಕರ್ನಾಟಕ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಗಿ ಸದನದ ಗೌರವಕ್ಕೆ ಧಕ್ಕೆ ತಂದಂತ ಬಿಜೆಪಿಯ 18 ಶಾಸಕರನ್ನು ಸದನದಿಂದ ಆರು ತಿಂಗಳ ಕಾಲ ಅಮಾನತುಗೊಳಿಸಿ ಸಭಾಧ್ಯಕ್ಷ ಯು.ಟಿ ಖಾದರ್ ರೂಲಿಂಗ್ ಹೊರಡಿಸಿದ್ದರು.
ಮುಸ್ಲಿಂ ಮೀಸಲಾತಿ ಮಸೂದೆ ಸೇರಿದಂತೆ ವಿವಿಧ ಮಸೂದೆ ವಿರೋಧಿಸಿ ಬಿಜೆಪಿಯ ಶಾಸಕರು ಪ್ರತಿಭಟನೆ, ಗದ್ದಲ ಕೋಲಾಹಲವನ್ನು ಉಂಟು ಮಾಡಿದ್ದರು.
ಈ ಹಿನ್ನಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿ ಆದೇಶಿಸಿದ್ದರು.
“ಸ್ಪೀಕರ್ ಸ್ಥಾನದಲ್ಲಿ ಕುಳಿತ ಖಾದರ್ ನಿಮ್ಮನ್ನು ಕ್ಷಮಿಸಬಹುದು. ಆದರೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದವರನ್ನು ಕ್ಷಮಿಸಲಾಗದು. ಪೀಠಕ್ಕೆ ಅಗೌರವ ತೋರಿದ್ದೀರಿ. ನಿಮ್ಮನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ” ಎಂದು ಸ್ಪೀಕರ್ ಯುಟಿ ಖಾದರ್ ಅವರು ಒಬ್ಬೊಬ್ಬರ ಹೆಸರು ಹೇಳುತ್ತಿದ್ದಂತೆಯೇ ಮಾರ್ಷಲ್ಸ್ ಅವರು ಅವರನ್ನು ಎತ್ತಿಕೊಂಡು ಹೊರಹಾಕಿದ್ದರು.
ಈ ಆದೇಶದ ಅನ್ವಯ ಬಿಜೆಪಿ ಶಾಸಕರಾದ
ಬಿಜೆಪಿಯ ದೊಡ್ಡನಗೌಡ ಪಾಟೀಲ್, ಅಶ್ವತ್ಥನಾರಾಯಣ, ಭರತ್ ಶೆಟ್ಟಿ, ಉಮಾನಾಥ ಕೊಟ್ಯಾನ್, ಬಿಪಿ ಹರೀಶ್, ಧೀರಜ್ ಮುನಿರಾಜ್, ಶರಣು ಸಲಗರ, ಬಿ ಸುರೇಶ್ ಗೌಡ, ಎಸ್.ಆರ್.ವಿಶ್ವನಾಥ್, ಮುನಿರತ್ನ, ಚನ್ನಬಸವ ಅಮಾನತ್ತಾಗಿದ್ದರು.
ಈ ಕುರಿತಂತೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಎರಡು ಬಾರಿ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿತ್ತು.
ಇದೀಗ ಬಂದಿರುವ ಮಾಹಿತಿಯನ್ವಯ ಅಮಾನತು ಆದೇಶವನ್ನು ಸ್ಪೀಕರ್ ಯುಟಿ ಖಾದರ್ ಹಿಂಪಡೆದಿದ್ದಾರೆ ಎಂದು ವರದಿಯಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.