ದೊಡ್ಡಬಳ್ಳಾಪುರ: ನಿನ್ನೆ ರಾತ್ರಿಯಷ್ಟೇ ವಿದ್ಯುತ್ ಅವಘಡದಿಂದ ತಾಲೂಕಿನ ರೈತನೋರ್ವ (Farmer) ಸಾವನಪ್ಪಿರುವ ಬೆನ್ನಲ್ಲೇ, ಇಂದೂ ಕೂಡ ಉಳುಮೆ ಮಾಡುವ ವೇಳೆ ಟ್ರಾಕ್ಟರ್ ಪಲ್ಟಿಯಾಗಿ ಮತ್ತೋರ್ವ ರೈತ ಸ್ಥಳದಲ್ಲಿಯೇ ಸಾವನಪ್ಪಿರುವ ಆಘಾತಕಾರಿ ಘಟನೆ ತಾಲೂಕಿನ ಚೆನ್ನಾಪುರದ ಬಳಿ ಸಂಭವಿಸಿದೆ.
ಮೃತರನ್ನು ಚೆನ್ನಾಪುರ ಗ್ರಾಮದ ನಿವಾಸಿ 50 ವರ್ಷದ ಚಂದ್ರಪ್ಪ (ಹೈಟೆಕ್ ಚಂದ್ರು) ಎಂದು ಗುರುತಿಸಲಾಗಿದೆ. ಇವರು ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಮುಖಂಡರಾಗಿದ್ದರು ಎನ್ನಲಾಗಿದೆ.
ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಇಂದು ಸ್ವಂತ ಜಮೀನಿನಲ್ಲಿ ಉಳುಮೆ ಮಾಡುವಾಗ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಪಲ್ಟಿಯಾಗಿದೆ. ಘಟನೆಯಲ್ಲಿ ಚಂದ್ರಪ್ಪ ಟ್ರಾಕ್ಟರ್ ಕೆಳಗೆ ಸಿಲುಕಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಮಡದಿ ಹಾಗೂ ಓರ್ವ ಮಗನನ್ನು ಅಗಲಿದ್ದಾರೆಂದು ತಿಳಿದು ಬಂದಿದೆ.
ಇನ್ನೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.