ಬೆಂಗಳೂರು: 18 ವರ್ಷಗಳ ಕಾಯುವಿಕೆಯ ನಂತರ ಮೊದಲ ಬಾರಿ ಐಪಿಎಲ್ ಚಾಂಪಿಯನ್ ಆಗಿ, ತವರಿಗೆ ಆಗಮಿಸಿದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬುಧವಾರ ಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸನ್ಮಾನಿಸಿದರು.
ಗುಜರಾತ್‌ನ ಅಹ್ಮದಾಬಾದ್‌ನಿಂದ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರ್‌ಸಿಬಿ ಆಟಗಾರರನ್ನು ಸರಕಾರದ ಪರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದರು.
ನಂತರ ಆರ್ ಬಿ ಆಟಗಾರರನ್ನು ವಿಶೇಷ ಬಸ್ಸುಗಳಲ್ಲಿ ಖಾಸಗಿ ಹೋಟೆಲ್‌ಗೆ ಕರೆದುಕೊಂಡು ಹೋಗಲಾಯಿತು.
ಸಂಜೆ 4.30ಕ್ಕೆ ಖಾಸಗಿ ಹೋಟೆಲ್‌ನಿಂದ ಬಸ್‌ಗಳಲ್ಲಿ ಆರ್‌ಸಿಬಿ ತಂಡವು ಗೆದ್ದ ಟ್ರೋಫಿ ಸಮೇತ ವಿಧಾನಸೌಧಕ್ಕೆ ಆಗಮಿಸಿತು.
ರಾಷ್ಟ್ರಗೀತೆ ಹಾಗೂ ನಾಡಗೀತೆ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಆಟಗಾರರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.

ಅಷ್ಟರಲ್ಲೇ ಮಳೆ ಬಂದ ಕಾರಣ ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿ ಆಟಗಾರರನ್ನು ಬಸ್‌ನಲ್ಲಿ ಕಳುಹಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹೋಟ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಚಿವರಾದ ಜಮೀರ್ ಅಹ್ಮದ್ ಖಾನ್, ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಸಮಾರಂಭವನ್ನು ಸಾವಿರಾರು ಮಂದಿ ಆರ್‌ಸಿಬಿ ಅಭಿಮಾನಿಗಳು ಕಣ್ಣುಂಬಿಕೊಂಡರು.
