ಬಳ್ಳಾರಿ; ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (Sri Krishna Devaraya University) ಬಳ್ಳಾರಿ ಹಾಗೂ ಸ್ಯಾಂಟಿಯಾಗೊ ಡಿ ಚಿಲಿಯ ಬರ್ನಾರ್ಡೊ ಒ ಹಿಗ್ಗಿನ್ಸ್ ವಿಶ್ವವಿದ್ಯಾಲಯವು (Bernardo O’Higgins University) ಶೈಕ್ಷಣಿಕ ಒಡಂಬಡಿಕೆ (MOU) ಒಪ್ಪಂದ ಕಾರ್ಯಕ್ರಮ ಬುಧವಾರ ಜೀವವಿಜ್ಞಾನ ಸಭಾಂಗಣದಲ್ಲಿ ನಡೆಯಿತು.
ಒಡಂಬಡಿಕೆ ನಂತರ ವಿವಿಯ ಕುಲಪತಿಗಳಾದ ಪ್ರೊ.ಎಂ ಮುನಿರಾಜು ಮಾತನಾಡಿ, ಶಿಕ್ಷಣದ ಭವಿಷ್ಯ, ಆವಿಷ್ಕಾರಗಳು ಹಾಗೂ ಗುಣಮಟ್ಟದ ಸಂಶೋಧನೆಯನ್ನು ಉತ್ತೇಜಿಸಲು ವಿಶ್ವಮಟ್ಟದ ವಿಶ್ವವಿದ್ಯಾಲಯಗಳೊಂದಿಗಿನ ಶೈಕ್ಷಣಿಕ ಒಡಂಬಡಿಕೆಗಳು ಮಹತ್ವದ್ದಾಗಿವೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಂತರಾಷ್ಟ್ರೀಯ ವಿವಿಗಳೊಂದಿಗಿನ ಮೂರನೇ ಶೈಕ್ಷಣಿಕ ಒಡಂಬಡಿಕೆಯಾಗಿದೆ ಎಂದು ತಿಳಿಸಿದರು.
ಗುಣಮಟ್ಟದ ಸಂಶೋಧನಾ ಲೇಖನಗಳು ಮತ್ತು ಉತ್ತಮ ಶಿಕ್ಷಣಕ್ಕೆ ಬೇಕಾದ ಅಂಶಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಡಂಬಡಿಕೆಗೆ ನಮ್ಮ ವಿಶ್ವವಿದ್ಯಾಲಯವು ಮುಂದಾಗಿದೆ ಎಂದರು.
ಬರ್ನಾರ್ಡೊ ಒ ಹಿಗ್ಗಿನ್ಸ್ ವಿವಿಯ ಪ್ರೊ ಸೀಸರ್ ಮೊರೇಲ್ಸ್ ವರ್ಡೆಜೊ ಮಾತನಾಡಿ, ಉನ್ನತ ಶಿಕ್ಷಣವನ್ನು ಜಗತ್ತಿನ ವಿಶ್ವವಿದ್ಯಾಲಯಗಳೊಂದಿಗೆ ಹಂಚಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದರಿಂದ ಜಾಗತಿಕ ಮಟ್ಟದ ಸಂಶೋಧನೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದರು.
ವಿಶ್ರೀಕೃ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಬರ್ನಾರ್ಡೊ ಒ ಹಿಗ್ಗಿನ್ಸ್ ವಿಶ್ವವಿದ್ಯಾಲಯದ ನಿರ್ದೇಶಕರು ಶೈಕ್ಷಣಿಕ ಒಡಂಬಡಿಕೆಗೆ ಪರಸ್ಪರ ಸಹಿ ಹಾಕುವುದರ ಮೂಲಕ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಡಾ. ಎನ್. ಎಂ ಸಾಲಿ, ಶುದ್ಧ ವಿಜ್ಞಾನ ನಿಕಾಯದ ಡೀನರಾದ ಡಾ. ಹನುಮೇಶ್ ವೈದ್ಯ ವೇದಿಕೆಯಲ್ಲಿದ್ದರು.
ವಿವಿಧ ನಿಕಾಯಗಳ ಡೀನರು, ಎಲ್ಲ ವಿಜ್ಞಾನ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.