ಬೆಂ.ಗ್ರಾ.ಜಿಲ್ಲೆ: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ (Dr. K.N. Anuradha) ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸಂಜೀವಿನಿ ಡೇ-ಎನ್.ಆರ್.ಎಲ್.ಎಂ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಡಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಿಬ್ಬಂದಿಗಳಿಗೆ ಸರ್ಕಾರದ ವಿವಿಧ ಇಲಾಖಾ ಕಾರ್ಯಕ್ರಮಗಳ ಒಗ್ಗೂಡಿಸುವಿಕೆಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಹಾಗಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಂಚಾಯಿತಿ ಮಟ್ಟದಲ್ಲಿ ಒಕ್ಕೂಟಗಳನ್ನು ರಚಿಸಿಕೊಂಡು ಗ್ರಾಮ ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳನ್ನು ರಚಿಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆರ್ಥಿಕ ಶಕ್ತಿ ತುಂಬಲಾಗುತ್ತಿದೆ.
ಮಹಿಳೆಯರು ಸ್ವಾವಲಂಬಿಯಾಗಿ ದುಡಿದು ಆರ್ಥಿಕವಾಗಿ ಸಧೃಡರಾಗಬೇಕು. ಆರ್ಥಿಕವಾಗಿ ಸ್ವಾತಂತ್ರಳಾಗದಿದ್ದರೆ ಎಂದಿಗೂ ಅವಳು ಸಬಲಳಾಗಲು ಸಾಧ್ಯವಿಲ್ಲ ಅದಕ್ಕಾಗಿ ಸರ್ಕಾರ ಮಹಿಳೆಯರಿಗೆ ಎನ್.ಆರ್.ಎಲ್.ಎಂ ಯೋಜನೆಯಡಿ ಹಲವಾರು ಉಚಿತ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದೆ ಮತ್ತು ಮಹಿಳೆಯರು ಸ್ವ ಉದ್ಯೊಗ ನಡೆಸಲು ಸ್ವ-ಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿದೆ.
ಅದರಂತೆಯೇ ಜಿಲ್ಲೆಯಲ್ಲಿ 6 ಸಾವಿರ ಸ್ವ-ಸಹಾಯ ಸಂಘಗಳಿದ್ದು ಅದರಲ್ಲಿ 60 ಸಾವಿರ ಜನ ಮಹಿಳಾ ಸದಸ್ಯರು ಇದ್ದಾರೆ. ಸ್ವ-ಸಹಾಯ ಸಂಘಗಳು 2017-2018 ರಿಂದ ಇದುವರೆಗೆ ಜಿಲ್ಲೆಯಲ್ಲಿ 50 ಕೋಟಿ ವಹಿವಾಟು ನಡೆಸಿದ್ದಾರೆ, 31 ಕೋಟಿ ಹಣವನ್ನು ಸಾಲ ಪಡೆದಿದ್ದು ಸದ್ಯ 21 ಕೋಟಿ ಹಣ ಮರು ಪಾವತಿಯಾಗಿದೆ ಹಾಗಾಗಿ ಮರು ಪಾವತಿ ಇನ್ನು ಹೆಚ್ಚು ನಡೆಸುವಂತೆ ಮಹಿಳಾ ಸಂಘದ ಸದಸ್ಯರಿಗೆ ತಿಳಿಸಿದರು.
ಎಸ್.ವಿ.ಇ.ಪಿ ಯೋಜನೆ
ಈ ಯೋಜನೆಯಡಿ 2400 ಮಹಿಳಾ ಉದ್ಯಮಿಗಳು ಸಾಲ ಪಡೆದು ಸ್ವ ಉದ್ಯೊಗವನ್ನು ನಡೆಸುತ್ತಿದ್ದಾರೆ. ಭಾಗ್ಯ ಎಂಬುವವರು ಸ್ವ-ಸಹಾಯ ಸಂಘದಿಂದ ಎಸ್.ವಿ.ಇ.ಪಿ ಯೋಜನೆಯಲ್ಲಿ ಸಾಲ ಪಡೆದು ಶುಭ ಸಮಾರಂಭಗಳಿಗೆ ಹೂವಿನ ಅಲಂಕಾರವನ್ನು ಮಾಡಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಇವರು ಲಾಭವನ್ನು ಗಳಿಸಿದ್ದಾರೆ. ಹಾಗೆಯೇ ಮಂಜಮ್ಮ ಅವರು ಈ ಯೋಜನೆಯಿಂದ ಸಾಲ ಪಡೆದು ಊಟದ ತಟ್ಟೆ ತಯಾರಕ ಯಂತ್ರವನ್ನು ಖರೀದಿಸಿ ಸ್ವ ಉದ್ಯೊಗವನ್ನು ಮಾಡುತ್ತಿದ್ದಾರೆ ಇದರಿಂದ ಅಧಿಕ ಲಾಭವನ್ನು ಗಳಿಸಿದ್ದಾರೆ.
ಪಿ.ಎಂ.ಎಫ್.ಎಂ.ಇ ಯೋಜನೆ
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಹಲವಾರು ಸ್ವ-ಸಹಾಯ ಸಂಘಗಳ ಮಹಿಳೆಯರು ಸಾಲ ಪಡೆದು ಸ್ವ ಉದ್ಯೊಗವನ್ನು ನಡೆಸುತ್ತಿದ್ದಾರೆ. ರಾಧಿಕಾ, ಜಗದೇಶ್ವರಿ ಸ್ವ-ಸಹಾಯ ಸಂಘ ಇವರು ಹಪ್ಪಳ ಮಾರಾಟ ಮಾಡುತ್ತಿದ್ದು ಇದರಿಂದ ಲಾಭವನ್ನು ಗಳಿಸಿದ್ದಾರೆ.
ಕೂಸಿನ ಮನೆ
ಅನೇಕ ಮಹಿಳೆಯರು ಮಕ್ಕಳನ್ನು ನೋಡಿಕೋಳ್ಳುತ್ತಲೆ ದುಡಿದು ಜೀವನ ನಡೆಸುತಿದ್ದಾರೆ. ಅವರಿಗೆ ದುಡಿಯುವ ಆಸೆ ಇದ್ದರು ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಅದಕ್ಕಾಗಿ ಕೂಸಿನ ಮನೆಯನ್ನು ಪ್ರಾರಂಭಿಸಿದ್ದು ಮಹಿಳೆಯರು ತಮ್ಮ ಮಕ್ಕಳನ್ನು ಅಲ್ಲಿ ಬಿಟ್ಟು ಕೆಲಸಕ್ಕೆ ಹೋಗಿ ಬರಬಹುದು ಇದರಿಂದ ಮಹಿಳೆಯು ಆರ್ಥಿಕವಾಗಿ ಸಬಲಳಾಗಬಹುದು.
ಎಸ್.ಡಬ್ಲ್ಯೂ.ಎಂ ಯೋಜನೆಯ ಸ್ವಚ್ಚವಾಹಿನಿ ವಾಹನವನ್ನು ಮಹಿಳೆಯರೆ ಚಲಾಯಿಸುವ ಅವಕಾಶ ಕಲ್ಪಿಸಲಾಗಿದೆ ಮತ್ತು ನಲ್ ಜಲ್ ಮಿತ್ರ ಯೋಜನೆಯಡಿ ಮಹಿಳೆಯರು ತರಬೇತಿ ಪಡೆದು ಕೆಲಸ ಮಾಡಬಹುದಾಗಿದ್ದು ಈ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಮಹಿಳೆಯರಿಗೆ ತಿಳಿಸಿದರು.
ಸ್ವ-ಸಹಾಯ ಗುಂಪುಗಳ ಕೊಡುಗೆ
ಗ್ರಾಮೀಣ ಮಟ್ಟದಲ್ಲಿ ಮಹಿಳೆಯರನ್ನು ಸಣ್ಣ ಗುಂಪುಗಳಾಗಿ ಸಂಘಟಿಸುವ ಮೂಲಕ ಆರ್ಥಿಕವಾಗಿ ಪುನಶ್ಚೇತನ ಗೊಳಿಸುವುದು ಸ್ವ ಸಹಾಯ ಸಂಘಗಳ ಮುಖ್ಯ ಗುರಿ. ಮಹಿಳೆಯರು ಸುಸ್ಥಿರ ವಾದ ಉದ್ಯೋಗಗಳನ್ನು ಕೈಗೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಬ್ಯಾಂಕ್ ಸಂಪರ್ಕ ಸೇವೆ, ಉದ್ಯಮದಾರರಾಗಿ ಬೆಳೆಯುವಲ್ಲಿ ಸೂಕ್ತ ಜ್ಞಾನ, ಕೌಶಲ್ಯ ಮತ್ತು ಅವಕಾಶಗಳನ್ನು ಒದಗಿಸಲಾಗುತ್ತದೆ.
ಸ್ವ-ಸಹಾಯ ಸಂಘಗಳಲ್ಲಿ ಎಲ್ಲಾ ಸದಸ್ಯರಿಗೂ ಸಮಾನ ಅವಕಾಶ ನೀಡಲಾಗಿದ್ದು, ಎಲ್ಲರಿಗೂ ಸಾಮಾನ ಸೌಲಭ್ಯ ಸಿಗಬೇಕು ಎಂದರು. ಹಾಗೇಯೇ ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಎಲ್ಲರಿಗೂ ಅರಿವು ಮೂಡಿಸಿ ಎಂದು ಸ್ವ ಸಂಘಗಳ ಸದಸ್ಯರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವ ಕುಮಾರ್ ಅವರು ಮಾತನಾಡಿ, ಎನ್.ಆರ್.ಎಲ್.ಎಂ ಒಂದು ದೊಡ್ಡ ಆಲದ ಮರದ ರೀತಿ ಸವಿಸ್ತಾರವಾಗಿ ಬೆಳೆಯುತ್ತಿದೆ. ಈ ಯೋಜನೆಯಡಿ ಪ್ರಮುಖವಾಗಿ ಮಹಿಳೆಯರು ಸ್ವತಂತ್ರವಾಗಿ ಬದುಕಲು ಆಸರೆಯಾಗಿದೆ.
ಸಮಾಜದಲ್ಲಿ ಇರುವ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಒಂದು ಆಶಯ ನಮ್ಮದು, ಇದೀಗ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮಹತ್ತರವಾದ ಹೆಜ್ಜೆಯನ್ನು ಇಡುತ್ತಿರುವುದು ಸಂತೋಷದ ವಿಷಯ, ಹಾಗೇ ಹೆಣ್ಣು ಮತ್ತು ಗಂಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಹಾಗಾಗಿ ಮಹಿಳೆಯರನ್ನು ಎಲ್ಲಾ ಕ್ಷೇತ್ರದಲ್ಲಿ ಸಮಾನವಾಗಿ ಕಾಣಬೇಕು, ಇದರ ಜೊತೆಗೆ ಸ್ವ – ಸಹಾಯ ಸಂಘಗಳ ಮೂಲಕ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಶೆಡ್ಡುಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದೇವೆ, ಇದೇ ರೀತಿ ಇನ್ನೂ ಉತ್ತಮ ತರಬೇತಿಯನ್ನು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಸೆಂಟ್ರಲ್ ಫಾರ್ ಸ್ಟೇಬಿಲೇಶನ್ ಡೆವಲಪ್ಮೆಂಟ್ ಜನರಲ್ ಮ್ಯಾನೇಜರ್ ಸತ್ಯನಾರಾಯಣ, ಯೋಜನಾ ನಿರ್ದೇಶಕರಾದ ವಿಠಲ್ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ನರೇಂದ್ರ ಬಾಬು, ಕೃಷಿ ಇಲಾಖೆ ಉನಿರ್ದೇಶಕರಾದ ಗಾಯಿತ್ರಿ, ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಲಕ್ಷ್ಮಣ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಚಿಕ್ಕಣ್ಣ, ಲೀಡ್ ಬ್ಯಾಂಕ್ ಮ್ಯಾನೇಜರ್ ರಾಮೋಜಿ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವ-ಸಹಾಯ ಸಂಘಗಳ ಸದಸ್ಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.