ನವದೆಹಲಿ: ಇತ್ತೀಚೆಗೆ ಅನೇಕ ಖಾಸಗಿ ಚಾನಲ್ ಗಳಿಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದು ಕಾರ್ಯವಾಗಿದ್ದು, ಊಹಾತ್ಮ ವರದಿಗಳ ಮೂಲಕ ವೀಕ್ಷಕರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿವೆ ಎಂಬ ಆರೋಪ ತೀವ್ರವಾಗಿದೆ. ಅಂತೇಯೇ RCB ವಿಚಾರದಲ್ಲಿಯೂ ಇದೇ ನಡೆದಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ಪ್ರಯತ್ನಕ್ಕೆ ಫಲ ಸಿಕ್ಕಿತ್ತು. ಟಿ20 ಕಪ್‌ಗೆ ರಾಯಲ್ ಚಾಲೆಂಜರ್ಸ್ ಮುತ್ತಿಟ್ಟಿತು. ಆದರೆ ವಿಪರ್ಯಾಸ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತದ ಸೂತಕ ಆವರಿಸಿತ್ತು.
ಈ ವಿಷಯವನ್ನು ಐದಾರು ದಿನ ಬಬ್ಬಲ್ ಗಮ್ ತರ ಹೇಳಿದ್ದನ್ನೇ ಹೇಳಿ, ತೋರಿಸಿದ್ದನೇ ತೋರಿಸುತ್ತಾ ಬೆಂಗಳೂರಿನ ಗೌರವ ಕಳೆದಿದ್ದಲ್ಲದೆ, ಚಿನ್ನಸ್ವಾಮಿ ಕ್ರೀಡಾಂಗಣದ ನಡೆಯಬೇಕಾದ ಅನೇಕ ಪಂದ್ಯಾವಳಿಗಳನ್ನು ಸ್ಥಳಾಂತರ ಮಾಡಿಸಲು ಕಾರಣವಾದ ಅನೇಕ ಖಾಸಗಿ ಚಾನಲ್‌ಗಳು ಕ್ರೀಡಾ ಅಭಿಮಾನಿಗಳ ಕೆಂಗಣಿಗೆ ಗುರಿಯಾಗಿವೆ.
ಆದರೆ ಇಷ್ಟಕ್ಕೆ ಸುಮ್ಮನಾಗದೆ, ವಿರಾಟ್ ಕೋಹ್ಲಿ ಅರೆಸ್ಟ್ಗೆ ಒತ್ತಾಯ, IPLನಿಂದ RCB ಬ್ಯಾನ್, RCB ಪ್ರಾಮಚೈಸಿ ಮಾರಾಟ ಎಂಬಂತೆ ತಲೆ ಬುಡ ಇಲ್ಲದೆ ವರದಿ ಮಾಡುತ್ತಲೇ ಇವೆ, ಖುದ್ದು RCB ಮ್ಯಾನೇಜ್ಮೆಂಟ್ ಸ್ಪಷ್ಟನೆ ನೀಡಿದರು.. ನೋ ಇವರು ಸುಳ್ಳುವರದಿ ನಿಲ್ಲುತ್ತಿಲ್ಲ.
IPLನಲ್ಲಿ ಕಠಿಣ ರೂಲ್ಸ್ ಜಾರಿಯಾಗುವ ಸಾಧ್ಯತೆಯಿದೆ. ಈ ನಿಯಮ ಜಾರಿಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಂಕಷ್ಟ ಎದುರಾಗುವುದು ಫಿಕ್ಸ್.. ಹೀಗಾಗಿ ರೂಲ್ಸ್ ಜಾರಿಗೂ ಮುನ್ನವೇ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮ್ಯಾನೆಜ್‌ಮೆಂಟ್ ಮನಸ್ಸು ಮಾಡಿದ್ಯಂತೆ.
RCB ಫ್ರಾಂಚೈಸಿ ಮಾರಾಟದ ಚರ್ಚೆಯ ಮಧ್ಯೆ ಖರೀದಿಸಬಹುದಾದ ಕುಬೇರರ ಪಟ್ಟಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಕೇಳಿ ಬಂದಿದೆ. ಇವು ಕೆಲ ಖಾಸಗಿ ಸುದ್ದಿವಾಹಿನಿಗಳ ವರದಿ.
ಅಂತಿಮವಾಗಿ ಆರ್‌ಸಿಬಿ ಟೀಮ್ ಖರೀದಿಸೋ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೇ ಕೇಳಲಾಗಿದೆ.
“Why do I need RCB? I don't even drink Royal Challenge” – DKS Saar 🍻🙏😂pic.twitter.com/SZ1aixSPEK
— Shilpa (@shilpa_cn) June 11, 2025
ಈ ತಲೆ ಬುಡ ಇಲ್ಲದ ಗಾಳಿ ಸುದ್ದಿ ಪ್ರಶ್ನೆಗೆ ಅಷ್ಟೇ ತೀಕ್ಷ್ಣ ಉತ್ತರ ನೀಡಿರುವ ಡಿಕೆ ಶಿವಕುಮಾರ್, ನನಗ್ಯಾಕೆ RCB ಟೀಮ್ ಬೇಕು? RCB ಟೀಮನ್ನು ನಾನು ಖರೀದಿಸುತ್ತಿಲ್ಲ ಎಂದು ಹೇಳಿದ್ದಾರೆ.
ನಾನು KSCA ಸದಸ್ಯ ಮಾತ್ರ. ಈ ಹಿಂದೆ ನನಗೆ ಕೆಎಸ್‌ಸಿಎ ಮ್ಯಾನೇಜ್‌ಮೆಂಟ್‌ಗೆ ಸೇರುವ ಆಫರ್ ಬಂದಿತ್ತು. ಆದರೆ ನನಗೆ ಸಮಯವಿಲ್ಲ. ನನ್ನ ಎಜುಕೇಷನ್ ಇನ್ಸ್‌ಟಿಟ್ಯೂಷನ್ ನೋಡಿಕೊಳ್ಳಲು ನಮ್ಮ ಕುಟುಂಬದ ಬೇರೆ ಸದಸ್ಯರಿಗೆ ಬಿಟ್ಟಿದ್ದೇನೆ. ನನಗೆ ಸಮಯವಿಲ್ಲದ ಕಾರಣ ತಾನು ಆರ್‌ಸಿಬಿ ಟೀಮ್ ಖರೀದಿಸುತ್ತಿಲ್ಲ. ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನು ಕುಡಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮುಂದುವರಿದು “ಜಾತಿಗಣತಿ ವಿರೋಧಿಸಿದ ಬಿಜೆಪಿ, ಈಗ ಗೊಂದಲ ನಿವಾರಿಸುವ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿರುವುದೇಕೆ?” ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಜಾತಿ ಗಣತಿ ವಿಚಾರವಾಗಿ ಮರು ಸಮೀಕ್ಷೆಗೆ ಮುಂದಾಗಿರುವ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಜಾತಿ ಗಣತಿ ವರದಿ ವಿರೋಧ ಮಾಡಿದವರು ಅವರಲ್ಲವೇ? ಅವರು ಜಾತಿಗಣತಿ ವರದಿ ಸ್ವೀಕಾರ ಮಾಡಲಿಲ್ಲ ಯಾಕೆ? ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ.
ಈ ವರದಿಯಲ್ಲಿ ಯಾರ ಅಂಕಿ ಅಂಶಗಳು ಬಿಟ್ಟುಹೋಗಿವೆ ಅವರ ಮಾಹಿತಿಯನ್ನು ಸೇರಿಸಲು ಅವಕಾಶ ನೀಡಲಾಗುವುದು. ಈಗಾಗಲೇ ನೀಡಿರುವ ವರದಿಯನ್ನು ನಾವು ಬಳಸಿಕೊಳ್ಳುತ್ತೇವೆ. ಸಮಾಜಗಳಿಗೆ ನ್ಯಾಯ ಒದಗಿಸಬೇಕು, ಗೊಂದಲಗಳನ್ನು ಬಗೆಹರಿಸಲು ನಾವು ಮುಂದಾಗಿದ್ದೇವೆ” ಎಂದು ತಿಳಿಸಿದರು.
ಈ ಬಾರಿ ವೈಜ್ಞಾನಿಕವಾಗಿ ಮಾಡಲಾಗುವುದೇ ಎಂದು ಕೇಳಿದಾಗ, ನಾವು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಜೈನ, ಲಂಬಾಣಿ, ಬೆಸ್ತ ಸೇರಿದಂತೆ ಅನೇಕ ಸಮಾಜದ ಜನರು ನನ್ನನ್ನು ಭೇಟಿ ಮಾಡಿ ಆತಂಕ ವ್ಯಕ್ತಪಡಿಸಿದ್ದರು. ನಮ್ಮ ಶಾಸಕರುಗಳು ಅವರ ಅಭಿಪ್ರಾಯ ತಿಳಿಸಿದ್ದರು. ಈ ಹಿಂದೆಯೂ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿತ್ತು.
ಮನೆ ಮನೆಗೆ ಹೋಗಿ ನಮ್ಮ ಅಧಿಕಾರಿಗಳು ಸಮೀಕ್ಷೆ ಮಾಡಿ ಚೀಟಿಯನ್ನು ಅಂಟಿಸಿದ್ದರು. ಅವರು ಮಾಡಿದ್ದು ವೈಜ್ಞಾನಿಕವಲ್ಲವೇ? ಕಳೆದ ಬಾರಿ ಅನೇಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ತಮ್ಮ ಸಮುದಾಯವನ್ನು ಹೇಳಿಕೊಳ್ಳಲು ಹಿಂಜರಿದರು. ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರವಾಗಿ ಹತ್ತಾರು ಬಾರಿ ಜಾಹೀರಾತು ನೀಡಲಾಗಿದೆ. ಅಧಿಕಾರಿಗಳು ಹಲವು ಬಾರಿ ಮನೆಗೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದಾರೆ. ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೊರರಾಜ್ಯದಲ್ಲಿ ಇರುವವರು ತಮ್ಮ ಮಾಹಿತಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿದೆ.
ನಮ್ಮ ಪಕ್ಷದ ಅಧ್ಯಕ್ಷರು ತಂದೆ ಸ್ಥಾನದಲ್ಲಿ ನಿಂತು ಕೆಲವು ಮಾರ್ಗದರ್ಶನ ನೀಡಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಯಾವ ರೀತಿ ಮಾಡಬೇಕು ಎಂದು ಚರ್ಚೆ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ 1 ಲಕ್ಷ ಜನರನ್ನು ಒಳಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಜಾತಿ ಗಣತಿ ವಿಚಾರದಲ್ಲಿ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿಯಲಾಗಿದೆ ಎಂದು ಕೇಳಿದಾಗ, “ನಾವು ಎಲ್ಲರ ಒತ್ತಡಕ್ಕೂ ಮಣಿದಿದ್ದೇವೆ. ನಾವು ಮಾಧ್ಯಮಗಳ ಒತ್ತಡಕ್ಕೂ ಮಣಿಯುತ್ತೇವೆ” ಎಂದರು.
ತಮ್ಮ, ತಮ್ಮ ಸಮಾಜದವರು ಸರಿಯಾಗಿ ಮಾಹಿತಿ ಒದಗಿಸುವಂತೆ ಸ್ವಾಮೀಜಿಗಳು ಮಾಡಬೇಕು
ಸರ್ಕಾರದ ತೀರ್ಮಾನವನ್ನು ವೀರಶೈವ ಸಮಾಜ ಸ್ವಾಗತಿಸಿದೆ ಎಂದು ಕೇಳಿದಾಗ, “ವೀರಶೈವ, ಒಕ್ಕಲಿಗ ಸೇರಿದಂತೆ ಬೇರೆ ಸಮಾಜಗಳ ಸ್ವಾಮೀಜಿಗಳು ನನಗೆ ಕರೆ ಮಾಡಿ ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ಎಲ್ಲಾ ಸಮಾಜಗಳ ಸ್ವಾಮೀಜಿಗಳು ತಮ್ಮ ಸಮುದಾಯದವರಿಗೆ ತಿಳುವಳಿಕೆ ನೀಡಿ ಈ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮಾಡಬೇಕು. ಈ ಸಮೀಕ್ಷೆಯಲ್ಲಿ ಎಲ್ಲರೂ ತಮ್ಮ ಸಮುದಾಯದ ಬಗ್ಗೆ ಸರಿಯಾಗಿ ವಿವರ ನೀಡಬೇಕು” ಎಂದು ಕರೆ ನೀಡಿದರು.
ಜಾತಿ ಗಣತಿ ವಿಚಾರದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಡಿ.ಕೆ. ಶಿವಕುಮಾರ್ ಅವರು ಮೇಲುಗೈ ಸಾಧಿಸಿದರೇ ಎಂದು ಕೇಳಿದಾಗ, “ಇದರಲ್ಲಿ ಯಾರ ಕೈ ಮೇಲಾಗುವ ವಿಚಾರವಿಲ್ಲ” ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಜನಗಣತಿ ಜತೆ ಜಾತಿಗಣತಿ ಮಾಡುವಾಗ ರಾಜ್ಯ ಸರ್ಕಾರ ಮಾಡುವ ಅಗತ್ಯವಿದೆಯೇ ಎಂದು ಕೇಳಿದಾಗ, “ಇದು ನಮ್ಮ ಪಕ್ಷದ ರಾಜಕೀಯ ಅಜೆಂಡಾ. ಇದನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ. ಜಾತಿಗಣತಿ ಮಾಡಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು ಎಂದು ರಾಹುಲ್ ಗಾಂಧಿ ಅವರು ಪ್ರತಿಪಾದಿಸಿದ್ದಾರೆ” ಎಂದು ತಿಳಿಸಿದರು.
ವಾಲ್ಮೀಕಿ ನಿಗಮ ಅಕ್ರಮಕ್ಕೂ ನಮ್ಮ ಶಾಸಕರು, ಸಂಸದರಿಗೂ ಸಂಬಂಧವಿಲ್ಲ
ವಾಲ್ಮೀಕಿ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರು ಹಾಗೂ ಸಂಸದರ ಮನೆ ಮೇಲೆ ಇಡಿ ದಾಳಿ ವಿಚಾರವಾಗಿ ಕೇಳಿದಾಗ, “ಈ ವಾಲ್ಮೀಕಿ ಹಗರಣಕ್ಕೂ ನಮ್ಮ ಶಾಸಕರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಮುಖಂಡರು ಯಾವುದೇ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿಲ್ಲ. ಅಧಿಕಾರಿಗಳು ದುರ್ಬಳಕೆ ಮಾಡಿದ್ದ ಶೇ.90 ರಷ್ಟು ಹಣವನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದರು.