ದೊಡ್ಡಬಳ್ಳಾಪುರ: ರಸ್ತೆ ಬದಿ ಸಾಗುತ್ತಿದ್ದವರಿಗೆ ಡಿಕ್ಕಿ ಹೊಡೆದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಟ್ರಂಚ್‌ಗೆ ಡಿಕ್ಕಿ ಹೊಡೆದ ಅಪಘಾತದಲ್ಲಿ (Accident) ಮೂವರಿಗೆ ಗಂಭೀರವಾದ ಪೆಟ್ಟು ಬಿದ್ದಿರುವ ಘಟನೆ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಬಳಿ ಇಂದು ಬೆಳಗ್ಗೆ ಸಂಭವಿಸಿತ್ತು.
ಬೆಂಗಳೂರು ಇಂದಿರಾನಗರದ ನಿವಾಸಿಗಳು ಇಂದು ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ತೆರಳುವಾಗ ಎದುರಾದ ವಾಹನ ತಪ್ಪಿಸುವ ಸಂದರ್ಭದಲ್ಲಿ ರಸ್ತೆ ಬದಿ ಸಾಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಟ್ರಂಚನಲ್ಲಿದ್ದ ಮರದ ಬುಡಕ್ಕೆ ಡಿಕ್ಕಿ ಹೊಡೆದಿತ್ತು.
ಇದೀಗ ಬಂದ ಮಾಹಿತಿ ಅನ್ವಯ ಪಾದಚಾರಿಗಳಿಬ್ಬರಲ್ಲಿ ಓರ್ವ ಸಾವನಪ್ಪಿದ್ದು, ಕಾರಿನಲ್ಲಿದ್ದ ಓರ್ವನಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ಬಿಹಾರ ಮೂಲದ ಮುಖೇಶ್ (38 ವರ್ಷ) ಎಂದು ಗುರುತಿಸಲಾಗಿದೆ. ಮತ್ತೋರ್ವ ವೀರೇಂದ್ರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.