Harithalekhani: ಮಹಾಕಾವ್ಯ ಮಹಾಭಾರತದಲ್ಲಿ, ಚಿತ್ರಾಂಗದನು ಶಂತನು ಮತ್ತು ಸತ್ಯವತಿಯ ಹಿರಿಯ ಮಗ. ಅವನ ತಂದೆಯ ಮರಣದ ನಂತರ, ಆತನು ಹಸ್ತಿನಾಪುರದ ಸಿಂಹಾಸನವನ್ನು ಏರಿದನು. ಆದರೆ ಇದೇ ಹೆಸರಿನ ಗಂಧರ್ವನಿಂದ ಕೊಲ್ಲಲ್ಪಟ್ಟನು.
ವಿವಾಹ ಕಾರ್ಯಗಳು ಮುಗಿದ ನಂತರ ನೃಪ ಶಂತನು ರಾಜನು ಆ ರೂಪಸಂಪನ್ನ ಕನ್ಯೆಯೊಂದಿಗೆ ಕೂಡಿ ತನ್ನ ಮನೆಯಲ್ಲಿ ವಾಸಿಸತೊಡಗಿದನು. ಶಂತನುವಿಗೆ ಸತ್ಯವತಿಯು ವೀರತೆಯಲ್ಲಿ ಮನುಷ್ಯರೆಲ್ಲರನ್ನೂ ಮೀರಿದ ಚಿತ್ರಾಂಗದ ಎನ್ನುವ ಧೀಮಂತ ವೀರ ಪುತ್ರನಿಗೆ ಜನ್ಮವಿತ್ತಳು. ನಂತರ ಪುನಃ ಆ ಮಹೇಷ್ವಾಸ ಪ್ರಭುವು ಸತ್ಯವತಿಯಲ್ಲಿ ವಿಚಿತ್ರವೀರ್ಯನೆನ್ನುವ ವೀರ್ಯವಂತ ರಾಜಪುತ್ರನನ್ನು ಪಡೆದನು.
ಅವರು ಯೌವನವನ್ನು ಹೊಂದುವುದರೊಳಗೇ ಆ ಧೀಮಾನ್ ರಾಜ ಶಂತನುವು ಕಾಲಧರ್ಮಕ್ಕೊಳಗಾದನು. ಶಂತನುವು ಸ್ವರ್ಗವಾಸಿಯಾದ ನಂತರ ಭೀಷ್ಮನು, ಸತ್ಯವತಿಯ ಇಚ್ಛೆಯಂತೆ, ಅರಿಂದಮ ಚಿತ್ರಾಂಗದನನ್ನು ರಾಜಸಿಂಹಾಸನದಲ್ಲಿ ಕೂರಿಸಿದನು.
ಚಿತ್ರಾಂಗದನಾದರೂ ತನ್ನ ಶೌರ್ಯದಿಂದ ಪೃಥ್ವಿಯ ಸರ್ವ ಪಾರ್ಥಿವರನ್ನೂ ಮನುಷ್ಯರಲ್ಲಿ ತನ್ನ ಸದೃಶ ಯಾರೂ ಇಲ್ಲವೇನೋ ಎನ್ನುವಂತೆ ಗೆದ್ದನು. ಈ ರೀತಿ ಅವನು ಎಲ್ಲ ಸುರರು, ಮನುಷ್ಯರು, ಅಸುರರೆಲ್ಲರನ್ನೂ ಗೆದ್ದಾಗ, ಅದೇ ಹೆಸರನ್ನು ಪಡೆದಿದ್ದ, ಬಲವಂತ ಗಂಧರ್ವರಾಜನು ಅವನನ್ನು ಎದುರಿಸಿದನು.
ಅವರೀವರ್ವರ ಮಧ್ಯೆ ಕುರುಕ್ಷೇತ್ರದಲ್ಲಿ ಮಹಾ ಯುದ್ಧವೇ ನಡೆಯಿತು. ಆ ಬಲವಂತ ಗಂಧರ್ವ-ಕುರುಮುಖ್ಯರ ನಡುವೆ ಹಿರಣ್ವತೀ ನದೀತೀರದಲ್ಲಿ ಮೂರು ವರ್ಷಗಳ ಕಾಲ ಯುದ್ಧ ನಡೆಯಿತು. ಒಂದೇ ಸಮನೆ ಶಸ್ತ್ರವೃಷ್ಠಿಯಾಗುತ್ತಿದ್ದ ಆ ಘೋರ ಯುದ್ಧದಲ್ಲಿ ಅಧಿಕ ಮಾಯೆಯ ವೀರ ಗಂಧರ್ವನು ಕುರುಸತ್ತಮನನ್ನು ವಧಿಸಿದನು.
ವಿಚಿತ್ರ ಶರಕಾರ್ಮುಕ ಕುರುಶ್ರೇಷ್ಠ ಚಿತ್ರಾಂಗದನನ್ನು ಕೊನೆಗೊಳಿಸಿ ಗಂಧರ್ವನು ದೇವಲೋಕವನ್ನು ಸೇರಿದನು. ಆ ಭೂರಿವರ್ಚಸ ನೃಪತಿಶಾರ್ದೂಲನು ತೀರಿಕೊಂಡ ನಂತರ ಬೀಷ್ಮ ಶಾಂತನವನು ಅವನ ಪ್ರೇತಕಾರ್ಯಗಳನ್ನು ನೆರವೇರಿಸಿದನು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)