ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಹಿಂದುಳಿದ ವರ್ಗಗಳ ಬಗ್ಗೆ, ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ, ಅಲ್ಪಸಂಖ್ಯಾತರ ಕುರಿತು ಪ್ರಾಮಾಣಿಕ ಕಾಳಜಿ ಇದೆಯೇ ಎಂದು ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ತಮ್ಮನ್ನು ತಾವು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಕರೆದುಕೊಳ್ಳುತ್ತಾರೆ. ಅಹಿಂದ ಚಾಂಪಿಯನ್ ಎಂದು ಕರೆದುಕೊಳ್ಳುತ್ತಾರೆ. ಇತ್ತೀಚೆಗೆ ಕಾಂತರಾಜು ವರದಿಯನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸುವುದಾಗಿ ಬೊಗಳೆ ಹೊಡೆಯತ್ತಿದ್ದೀರಲ್ಲವೇ? ದೆಹಲಿಯಿಂದ ದೂರವಾಣಿ ಕರೆ ಬಂದ ನಂತರ, ರಾಹುಲ್ ಗಾಂಧಿಯವರು ಆದೇಶ ಮಾಡಿದ್ದಾರೆಂದು 165 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದ್ದ ಕಾಂತರಾಜು ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದೀರಲ್ಲವೇ? ಆಗ ನಿಮ್ಮ ಹಿಂದುಳಿದವರ ಕಾಳಜಿ ಎಲ್ಲಿ ಹೋಗಿತ್ತು ಎಂದು ಕೇಳಿದರು.
ನಿನ್ನೆ ಬೆಂಗಳೂರಿನಲ್ಲಿ ಎಐಸಿಸಿಯ ಒಬಿಸಿ ಸಮಿತಿ ಸಭೆ ನಡೆದಿದೆ. ಇದು ದೇಶಾದ್ಯಂತ ಸುದ್ದಿಯಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ದೇಶದಲ್ಲಿ ಸಾಮಾಜಿಕ ನ್ಯಾಯದ ಆಂದೋಲನವನ್ನು ಮುನ್ನಡೆಸುವ ಜವಾಬ್ದಾರಿ ಈ ಸಮಿತಿಗೆ ಇದೆ; ದೀರ್ಘ ಕಾಲದಿಂದ ಅಧಿಕಾರ, ಅವಕಾಶ ಮತ್ತು ಘನತೆಯಿಂದ ವಂಚಿತವಾದ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಏಳಿಗೆ ಆಗದೆ ದೇಶದ ಅಭಿವೃದ್ಧಿ ಸಾಧ್ಯವಾಗದು ಎಂದಿದ್ದಾಗಿ ಗಮನಕ್ಕೆ ತಂದರು.
ಬಿಜೆಪಿ ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ವಿರೋಧಿ; ಮೀಸಲಾತಿ ಪರವಾಗಿ ಬಿಜೆಪಿ ಇರಲಿಲ್ಲ ಎಂಬ ಆರೋಪವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಇವರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲು ಸಾಧ್ಯವೇ?
ಮಂಡಲ್ ವರದಿಯನ್ನು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಅನುಷ್ಠಾನ ಮಾಡಿದೆಯೇ? ಕಾಂಗ್ರೆಸ್ ಪಕ್ಷ ಅದಕ್ಕೆ ಬೆಂಬಲ ಕೊಟ್ಟಿತ್ತೇ? 1956ರಲ್ಲಿ ಕಾಕಾ ಕಾಲೇಕರ್ ವರದಿಯನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಸದ ಬುಟ್ಟಿಗೆ ಹಾಕಿದರಲ್ಲವೇ? ಈ ಮಾಹಿತಿ ಸಿದ್ದರಾಮಯ್ಯನವರಿಗೆ ಇಲ್ಲವೇ ಎಂದು ವಿಜಯೇಂದ್ರ ಅವರು ಪ್ರಶ್ನಿಸಿದರು.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಗಳನ್ನು, ಅಲ್ಪಸಂಖ್ಯಾತರನ್ನು ತಮ್ಮ ಮನೆಯಾಳುಗಳ ರೀತಿ ನೆಹರೂ- ಗಾಂಧಿ ಕುಟುಂಬ ನೋಡಿಕೊಂಡು ಬಂದಿದೆ. ಇಂಥ ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಲು ಸಾಧ್ಯವೇ ಎಂದು ದೇಶದ ಹಾಗೂ ರಾಜ್ಯದ ಜನರು ಕೇಳುತ್ತಿದ್ದಾರೆ ಎಂದು ತಿಳಿಸಿದರು.
ಬಿಹಾರ ಚುನಾವಣೆಗಾಗಿ ಮೊಸಳೆಕಣ್ಣೀರು
ಬಿಹಾರ ರಾಜ್ಯದ ಚುನಾವಣೆ ಸಮೀಪಿಸುತ್ತಿರುವ ಕಾರಣ ಎಐಸಿಸಿಯ ಒಬಿಸಿ ಸಮಿತಿಯು ಸಿದ್ದರಾಮಯ್ಯನವರ ಮೂಲಕ ಹಿಂದುಳಿದ ವರ್ಗಗಳ ಕುರಿತು ಮೊಸಳೆಕಣ್ಣೀರು ಹಾಕುತ್ತಿದೆ. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ 55-60 ವರ್ಷಗಳ ಕಾಲ ದೇಶ- ರಾಜ್ಯದ ಆಡಳಿತ ನಡೆಸಿದೆ. ಒಂದೇ ಕುಟುಂಬದವರು ಕೇಂದ್ರದಲ್ಲಿ 50 ವರ್ಷ ಅಧಿಕಾರ ನಡೆಸಿದ್ದಾರೆ. 2025ರಲ್ಲಿ ಕೂಡ ಸಿದ್ದರಾಮಯ್ಯನವರು, ಕಾಂಗ್ರೆಸ್ ಪಕ್ಷಕ್ಕೆ ಈ ದೇಶ- ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯವಾಗುತ್ತಿದೆ ಎಂದು ಅನಿಸಿದ್ದರೆ ಅದಕ್ಕೆ ಹೊಣೆ ಯಾರು ಎಂದು ಕೇಳಿದರು. ಕಾಂಗ್ರೆಸ್ ಪಕ್ಷ ಅದರ ಹೊಣೆ ಹೊರಬೇಕಿದೆ ಎಂದು ತಿಳಿಸಿದರು.
ಮೋದಿ ಅವರ ನಿರಂತರ ದೇಶಸೇವೆ..
ಸಿದ್ದರಾಮಯ್ಯನವರು ಭ್ರಮೆಯಲ್ಲಿದ್ದಾರೆ. ಇವರೊಬ್ಬರೇ ಹಿಂದುಳಿದ ವರ್ಗಗಳ ಮತ್ತು ಅಹಿಂದ ಚಾಂಪಿಯನ್ ಎಂದು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು 2001ರಿಂದ 2014ರವರೆಗೆ ಸತತ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ ಆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಿದರು.
2014ರಿಂದ ಕಳೆದ 11 ವರ್ಷಗಳಲ್ಲಿ ನಿರಂತರವಾಗಿ ಪ್ರಧಾನಿ ಮೋದಿಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಮೋದಿ ಅವರು ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ವಿಜಯೇಂದ್ರ ಅವರು ಗಮನ ಸೆಳೆದರು. ಅವರದು ರಾಜಕೀಯ, ರಾಜವಂಶಸ್ಥ ಕುಟುಂಬ ಅಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯನವರೇ ನಿಮ್ಮ ಥರ ಅವರು ಅದೃಷ್ಟದ ಸಿಎಂ ಅಲ್ಲ
ಲಾಟರಿ ಮುಖ್ಯಮಂತ್ರಿಯೂ ಅಲ್ಲ. ತಮ್ಮ ಪರಿಶ್ರಮದಿಂದ, ಈ ದೇಶದ ಬಗ್ಗೆ ವಿಶಿಷ್ಟ ಕಲ್ಪನೆ ಇಟ್ಟುಕೊಂಡು, ಭಾರತದ ಅಭಿವೃದ್ಧಿಗೆ ಸಂಕಲ್ಪ ಇಟ್ಟುಕೊಂಡು ಕಳೆದ 11 ವರ್ಷಗಳಿಂದ ನಿರಂತರ ದೇಶಸೇವೆ ಮಾಡುತ್ತಿದ್ದಾರೆ; ಮೋದಿ ಅವರು ನಿಮ್ಮ ಥರ ಹಿಂದುಳಿದ ವರ್ಗದವರು ಎಂದು ಎಲ್ಲೂ ಕೂಡ ಹೇಳಿಕೊಂಡು ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಮಾಡಿಲ್ಲಣ ಬದಲಾಗಿ ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ಎಲ್ಲರನ್ನೂ ಒಗ್ಗೂಡಿಸಿ ಈ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಸಿದ್ದರಾಮಯ್ಯನವರು, ಬಿಜೆಪಿ ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ. ದೇಶದ ಪ್ರಥಮ ಪ್ರಜೆ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದು ಎಂದು ತಿಳಿಸಿದರು.
ಹಿಂದೆ ಬಿಜೆಪಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಗಳಾಗಿ ಮಾಡಿತ್ತು. ಇದು ಕಾಂಗ್ರೆಸ್ ಪಕ್ಷದವರು ಮಾಡಿದ್ದಲ್ಲ. ಇಡೀ ದೇಶದಲ್ಲಿ 6 ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದ ಬಿಜೆಪಿಯ ಮುಖ್ಯಮಂತ್ರಿಗಳಿದ್ದಾರೆ. 4 ರಾಜ್ಯಗಳಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರು ರಾಜ್ಯ ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ವರ್ಗಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು. ಇವರ ಯೋಗ್ಯತೆಗೆ ಅದು ಸಾಧ್ಯವಿಲ್ಲ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದನ್ನು ಒಪ್ಪಲು ಅಸಾಧ್ಯ ಎಂದರು.
ಜಾತಿ ಜಾತಿಗಳ ನಡುವೆ ವಿಷಬೀಜ..
ಕಾಂಗ್ರೆಸ್ ಪಕ್ಷವು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಹಿಂದುಳಿದ ವರ್ಗಗಳ, ಎಸ್‍ಸಿ, ಎಸ್‍ಟಿ ಸಮಾಜದ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆಯೂ ನಿಮಗೆ ಕಾಳಜಿ ಇಲ್ಲ. ನಿಮ್ಮದು ಕೇವಲ ಮೊಸಳೆ ಕಣ್ಣೀರು ಎಂದು ಟೀಕಿಸಿದರು.
ಪ್ರಧಾನಿಯವರು ದೂರದೃಷ್ಟಿಯಿಂದ ಕೊಟ್ಟ ಪ್ರತಿ ಕಾರ್ಯಕ್ರಮವೂ ಸರ್ವಸ್ಪರ್ಶಿ, ಸರ್ವವ್ಯಾಪಿ. ಮುಸಲ್ಮಾನರ ಬಗ್ಗೆ ಇವರು ಕೇವಲ ಮಾತನಾಡುತ್ತಾರೆ, ತ್ರಿವಳಿ ತಲಾಖ್ ರದ್ದು ಕುರಿತು ಮೋದಿಜೀ ಅವರು ದಿಟ್ಟ ನಿರ್ಧಾರ ಮಾಡಿದ್ದಾರೆ ಎಂದು ಗಮನ ಸೆಳೆದರು.
ರಾಹುಲ್ ಗಾಂಧಿ, ಸಿದ್ದರಾಮಯ್ಯ- ಕಾಂಗ್ರೆಸ್ಸಿನಿಂದ ನಾವು ಆತಂಕ ಪಡುವ ಪ್ರಶ್ನೆಯೇ ಇಲ್ಲ. ಮೋದಿಜೀ ಅವರು ಜಾತಿ ಜನಗಣತಿ ಬಗ್ಗೆ ಪ್ರಾಮಾಣಿಕ ಕಳಕಳಿಯಿಂದ ನಿರ್ಧಾರ ಮಾಡಿದ್ದಾರೆ. ಎಲ್ಲಿದ್ದಾರೆ ಸಿದ್ದರಾಮಯ್ಯನವರು ಇವತ್ತು ಎಂದು ಕೇಳಿದರು. ಇವರ ಬೂಟಾಟಿಕೆ, ನಾಟಕ ನಡೆಯಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಕುದುರೆವ್ಯಾಪಾರ
ಕಾಂಗ್ರೆಸ್ ಪಕ್ಷದ ಒಳಬೇಗುದಿ ಮುಂದುವರೆದಿದೆ. ಆಡಳಿತ ಪಕ್ಷದ ಶಾಸಕರು ಹತಾಶರಾಗಿದ್ದಾರೆ. ಯಾರ ಪರ ವಕಾಲತ್ತು ವಹಿಸಬೇಕು? ಸಿದ್ದರಾಮಯ್ಯನವರ ಪರವೇ ಅಥವಾ ಡಿ.ಕೆ.ಶಿವಕುಮಾರ್ ಪರ ಇರಬೇಕೇ ಎಂಬ ಗೊಂದಲ ಶಾಸಕರದು. ಇದರ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಕುದುರೆವ್ಯಾಪಾರ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಡ್ರಗ್ ಮಾಫಿಯ ಕರ್ನಾಟಕಕ್ಕೆ ಹೊಸದಲ್ಲ. ಪ್ರಿಯಾಂಕ್ ಖರ್ಗೆ ಉಸ್ತುವಾರಿ ಸಚಿವರಾಗಿರುವ ಗುಲ್ಬರ್ಗ ಜಿಲ್ಲೆಯಲ್ಲಿ ಅದು ಗರಿಷ್ಠ ಪ್ರಮಾಣದಲ್ಲಿದೆ. ಬಂಧಿತ ವ್ಯಕ್ತಿಯೂ ಪ್ರಿಯಾಂಕ್ ಖರ್ಗೆಯವರ ಅತ್ಯಂತ ಸಾಮೀಪ್ಯ ಇದ್ದವರು ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು. ಕರ್ನಾಟಕದಲ್ಲಿ ಡ್ರಗ್ ಮಾಫಿಯದ ವಿರುದ್ಧ ಗಂಭೀರ ಕ್ರಮ ಅಗತ್ಯ ಎಂದರು.