ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ಬಣಬಡಿದಾಟ ದಿನೇದಿನೇ ತೀವ್ರಗೊಳ್ಳುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಜಟಿಲ ವಾಗುತ್ತಿದೆ.
ಇತರೆ ರಾಜ್ಯಗಳ ಅಧ್ಯಕ್ಷರನ್ನು ವರಿಷ್ಠರು ಘೋಷಣೆ ಮಾಡುತ್ತಿದ್ದರೂ ಕರ್ನಾಟಕದಲ್ಲಿ ಯಾರಿಗೆ ಪಟ್ಟ ಎಂಬ ಕುರಿತಾಗಿ ಗಟ್ಟಿ ನಿರ್ಧಾರ ಕೈಗೊಳ್ಳಲು ಈ ಕ್ಷಣದ ವರೆಗೂ ಹೈಕಮಾಂಡ್ ವರಿಷ್ಠರಿಗೆ ಸಾಧ್ಯವಾಗದಿರುವುದು ಕೂಡ ಅನುಮಾನ ಹುಟ್ಟುಹಾಕಿದೆ.
ಶಿಸ್ತಿನ ಪಕ್ಷ ಎಂದೇ ತನ್ನನ್ನು ಗುರುತಿಸಿಕೊಂಡ ಬಿಜೆಪಿ ಯಲ್ಲಿ ಶಿಸ್ತು ಪದೇ ಪದೆ ಶಿಸ್ತು ಉಲ್ಲಂಘನೆಯಾಗುತ್ತಿದೆ ಎಂಬುದು ನೊಂದ ಕಾರ್ಯಕರ್ತರ ಅಳಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಹೈಕಮಾಂಡ್ ಅಷ್ಟೊಂದು ಪ್ರಬಲವಾಗಿದ್ದರೂ ನಾಯಕರು ಕರ್ನಾಟಕದ ಕುರಿತಾಗಿ ನಿರ್ಧಾರ ಕೈಗೊಳ್ಳಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಕೂಡ ಕಗ್ಗಂಟಾಗಿ ಉಳಿದಿದೆ.
ಬಿ.ವೈ.ವಿಜಯೇಂದ್ರ. (B.Y.Vijayendra) ಅವರನ್ನು ಮುಂದುವರಿಸಬೇಕೋ, ಬೇಡವೋ ಎಂಬುದು ಕೂಡ ಹೈಕಮಾಂಡ್ ನಾಯಕರಿಗೆ ಕಾಡುತ್ತಿದೆ ಎಂಬುದು ಬಹಿರಂಗ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ. ಇದು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು. ಬೇರೆ ಯಾವ ರಾಜ್ಯದಲ್ಲೂ ಬಿಜೆಪಿ ಅಧಿಕಾರ ಗಳಿಸಿಲ್ಲ.
ಆದರೆ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರಯತ್ನದಿಂದ ಬಿಜೆಪಿ ಆಡಳಿತ ನಡೆಸಿದೆ. ಆದರೆ ಅದೇ ಯಡಿಯೂರಪ್ಪ ಅವರನ್ನು 75 ವರ್ಷದ ಕಾರಣ ನೀಡಿ, ಅಧಿಕಾರದಿಂದ ಕೆಳಗಿಳಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂಲೆ ಗುಂಪಾಗಿ ಮಾಡಲಾಗಿತು. ಇದರ ಪರಿಣಾಮ ಪಕ್ಷ ಎದುರಿಸಬೇಕಾಗಿ ಬಂದಿರುವುದು ವಾಸ್ತವ.
ಯಡಿಯೂರಪ್ಪ ಕುಟುಂಬಕ್ಕೆ ಮಣೆ ಹಾಕಿರುವುದಕ್ಕೆ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನ ಹೈಕಮಾಂಡ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ನಡುವೆ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮನ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಭೆಗಳು ನಡೆದಿದ್ದವು. ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಅವರ ನಿವಾಸದಲ್ಲಿ RSS ನಾಯಕರ ಸಮ್ಮುಖದಲ್ಲಿ ನಡೆದ ಸಂಧಾನ ಮಾತುಕತೆಗಳು ಫಲ ಕೊಡಲಿಲ್ಲ. ಎರಡು ಸಭೆ ನಡೆಸಿದರೂ ಅದರಿಂದ ಅನುಕೂಲ ಆಗಿಲ್ಲ.
ಇದರ ನಡುವೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಪೋಸ್ಟ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಉಚ್ಚಾಟಿತ ಶಾಸಕ ಯತ್ನಾಳ್, ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭಸುದ್ದಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಕರ್ನಾಟಕ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಯತ್ನಾಳ್ ಮಾಡಿರುವ ಪೋಸ್ಟ್ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಶುಭ ಸುದ್ದಿ ಯಾರಿಗೆ? ಅಂತ ಸಾರ್ವಜನಿಕರು ತಲೆ ಕೆಡಿಸಿಕೊಂಡಿದ್ದಾರೆ. ಬಿಜೆಪಿ ರೆಬೆಲ್ ಟೀಮ್ ನಿರಂತರ ಯಡಿಯೂರಪ್ಪ ಕುಟುಂಬದ ವಿರುದ್ಧ ಸೆಟೆದು ನಿಂತಿದ್ದು ಹೈ ಕಮಾಂಡ್ ಶಾಕ್ ಕೊಡುತ್ತಾ ಅನ್ನೋ ಕೌತುಕ ಮನೆಮಾಡಿದೆ.
ಉಚ್ಚಾಟಿತರಾದ ಯತ್ನಾಳ್ ಅವರು ಮರಳಿ ಬಿಜೆಪಿ ಪಾಳಯಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಸದ್ದಿಲ್ಲದೇ ಯತ್ನಾಳ್ ಎಂಟ್ರಿಗೆ ಸಿದ್ಧತೆ ನಡೆದಿದೆ ಎನ್ನಲಾಗಿದ್ದು, ಕೇಸರಿಪಡೆಯಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆ ನಿರೀಕ್ಷೆ ಮಾಡಲಾಗಿದೆ.
ಈ ನಡುವೆ ಬಹುತೇಕ 1 ವಾರದಲ್ಲಿ ಬಿಜೆಪಿ ರಾಜ್ಯಧ್ಯಕ್ಷರ ಆಯ್ಕೆ ಆಗಲಿದೆ ಎನ್ನಲಾಗುತ್ತಿದ್ದು, ಈ ಎಲ್ಲಾ ಬೆಳವಣಿಗೆ ಮಧ್ಯೆ ಯತ್ನಾಳ್ ಮಾಡಿರೋ ಪೋಸ್ಟ್ ಹೊಸ ಸಂಚಲನ ಮೂಡಿಸಿದೆ.
ಬಿಜೆಪಿ ರೆಬೆಲ್ ಲೀಡರ್ಸ್ ಹಾಗೂ ವಿಜಯೇಂದ್ರ ನಡುವೆ ರಾಜೀ ಸಂಧಾನಕ್ಕೆ ಜೋಶಿ ಹಾಗೂ ಸದಾನಂದಗೌಡ ಮಧ್ಯಸ್ಥಿತಿಕೆ ವಹಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ವಿರೋಧಿ ಬಣ ಸ್ಟ್ರಾಂಗ್ ಆಗಿ ಆ್ಯಕ್ಟಿವ್ ಆಗುತ್ತಿದ್ದಂತೆಯೇ ಮಗ ವಿಜಯೇಂದ್ರನನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ ಎನ್ನಲಾಗಿದೆ. ಹೀಗಿರುವಾಗ ಯತ್ನಾಳ್ ಪೋಸ್ಟ್ ಹೊಸ ಚರ್ಚೆ ಹುಟ್ಟುಹಾಕಿದೆ.