ಕೊರಟಗೆರೆ: ಲಾರಿಯ ಬ್ರೇಕ್ ಫೆಲ್ಯೂರ್ ಆಗಿ ಬೇಕರಿ ಮತ್ತು ಬಳೆ ಅಂಗಡಿಗೆ ನುಗ್ಗಿದ ಪರಿಣಾಮ (Accident) ಬೇಕರಿ ಮುಂದೆ ನಿಂತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ಕೋಳಾಲ ಗ್ರಾಮದಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಕೋಳಾಲದಲ್ಲಿ ಮಂಗಳವಾರ ಮಧ್ಯಾಹ್ನ ತುಮಕೂರಿನಿಂದ ಕೋಳಾಲದ ಗೊಬ್ಬರದ ಅಂಗಡಿಗೆ ಗೊಬ್ಬರ ತುಂಬಿಕೊಂಡು ಬರುತ್ತಿದ್ದ ಲಾರಿ ಇಳಿ ಜಾರಿನಲ್ಲಿ ಲಾರಿಯ ಬ್ರೇಕ್ ಫೆಲ್ಯೂರ್ ಆಗಿ ವೇಗವಾಗಿ ಬಂದು ಬಸ್ ನಿಲ್ದಾಣದಲ್ಲಿರುವ ಬಸವೇಶ್ವರ ಬೇಕರಿ ಹಾಗೂ ಪಕ್ಕದ ಬಳೆ ಅಂಗಡಿಗೆ ಗುದ್ದಿದೆ.
ಬೇಕರಿ ಮುಂದೆ ಇದ್ದ ಕಾಟೇನಹಳ್ಳಿ ಗ್ರಾಮದ ರಂಗಶಾಮಯ್ಯ (65 ವರ್ಷ) ಪುರದಹಳ್ಳಿ ಬೈಲಪ್ಪ (65 ವರ್ಷ) ಹಾಗೂ ಕೋಳಾಲದ ಜಯಣ್ಣ (55 ವರ್ಷ) ಮೃತಪಟ್ಟ ದುರ್ದೈವಿಗಳು.
ಅಪಘಾತದಲ್ಲಿ 5 ಜನರು ಗಾಯಗೊಂಡಿದ್ದು, ಸಿದ್ದಗಂಗಾ ಆಸ್ಪತ್ರೆಯಲ್ಲಿ ತಾಪಂ ಮಾಜಿ ಸದಸ್ಯೆ ಸಿದ್ದಗಂಗಮ್ಮ, ವಡ್ಡರಹಳ್ಳಿ ಕಾಂತರಾಜು ಹಾಗೂ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಸವೇಶ್ವರ ಬೇಕರಿ ಮಾಲೀಕ ಮಂಜುನಾಥ್, ಕಾಟೇನಹಳ್ಳಿ ಮೋಹನ್ ದಾಖಲಾಗಿದ್ದಾರೆ. ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ತಾಪಂ ಸದಸ್ಯೆ ಸಿದ್ದಗಂಗಮ್ಮ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಕೊರಟಗೆರೆ ತಾಲ್ಲೂಕಿನ ಕೋಳಾಲದಲ್ಲಿ ಗೊಬ್ಬರ ತುಂಬಿದ್ದ ಲಾರಿ ಅಂಗಡಿಗೆ ನುಗ್ಗಿದ ಪರಿಣಾಮ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿರುವ ಸುದ್ದಿ ತಿಳಿದು ಆಘಾತವಾಯಿತು.
— Dr. G Parameshwara (@DrParameshwara) July 22, 2025
ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ. ದುಖತಪ್ತ ಕುಟುಂಬವರ್ಗದವರಿಗೆ ನನ್ನ ತೀವ್ರ ಸಂತಾಪಗಳು. pic.twitter.com/G2KHrYcyDt
ಹಿಂದೆಯೂ ಕೂಡ ಇದೇ ರೀತಿ ನಡೆದ ಉದಾಹರಣೆ ಇದೆ. ರೋಡ್ ಹಂಪ್ ಇಲ್ಲದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಸ್ಥಳೀಯ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬಿಸ್ಕತ್ ಖರೀದಿಗೆ ಬಂದವರು ಮಸಣಕ್ಕೆ
ಅಪಘಾತವಾದ ಸ್ಥಳ ಕೋಳಾಲ ಗ್ರಾಮದ ಬಸ್ ನಿಲ್ದಾಣದಲ್ಲಿ ಪಕ್ಕದಲ್ಲಿದ್ದು, ಮಂಗಳವಾರ ಮಧ್ಯಾಹ್ನ ಅಪಘಾತ ನಡೆದಿದ್ದು, ವೇಗವಾಗಿ ಬಂದ ಲಾರಿ ಬೇಕರಿಯಲ್ಲಿ ಖರೀದಿ ಮಾಡುತ್ತಿದ್ದ ಹಾಗೂ ಪಕ್ಕದಲ್ಲಿಯೇ ಇದ್ದ ಬಳೆ ಅಂಗಡಿ ಮುಂದೆ ನಿಂತಿದ್ದ ಜನರ ಮೇಲೆ ಹರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಸ್ ನಿಲ್ದಾಣದ ಪಕ್ಕದಲ್ಲಿಯೇ ಬೇಕರಿ ಇದ್ದುದರಿಂದ ಬಿಸ್ಕತ್ ಹಾಗೂ ಇತರೇ ತಿನಿಸುಗಳನ್ನು ತೆಗೆದುಕೊಂಡು ಹೋಗಲು ಅಲ್ಲಿಗೆ ಆಗಮಿಸಿದ್ದರು ಎನ್ನಲಾಗಿದೆ
ಬೇಕರಿಯಲ್ಲಿ ಖರೀದಿ ವೇಳೆ ಏಕಾಏಕಿ ವೇಗವಾಗಿ ಬಂದ ಲಾರಿ ಅವರನ್ನು ಬಲಿ ಪಡೆದಿದೆ. ಈ ಘಟನೆಯಲ್ಲಿ ಗ್ರಾಹಕರಲ್ಲದೆ, ಬೇಕರಿ ಮಾಲೀಕರಿಗೂ ಸಹ ಗಂಭೀರ ಗಾಯಗಳಾಗಿದ್ದು ಅವರನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.