ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಣೆ ಮತ್ತು ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಆರೋಪಿಸಿದ್ದಾರೆ. ಇದನ್ನು ಖಂಡಿಸಿ ನಾಳೆ (ಜುಲೈ 28ರಂದು) ರಾಜ್ಯ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ. 2 ಹಂತಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ನಾಡಿನ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಮುಖ್ಯಮಂತ್ರಿಗಳಿಗೆ ಈ ನಾಡಿನ ರೈತರ ಬಗ್ಗೆ ತಾತ್ಸಾರ ಏಕೆ ಎಂಬುದು ನಮಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾದ ದಿನದಿಂದ ಈ ನಾಡಿನ ರೈತರಿಗೆ ಒಳಿತಾಗುವಂತಹ ಯಾವುದೇ ಕ್ರಮವನ್ನು, ನಿರ್ಧಾರಗಳನ್ನು, ಯೋಜನೆಗಳನ್ನು ಕೈಗೊಂಡಿಲ್ಲ ಎಂದು ಟೀಕಿಸಿದರು.
ಮುಂಗಾರು ಮಳೆ ವಾಡಿಕೆಗಿಂತ ಮುಂಚಿತವಾಗಿ ಆರಂಭವಾಗಿರುವ ಬಗ್ಗೆ ಅರಿವು ರಾಜ್ಯ ಸರ್ಕಾರಕ್ಕೆ ಮತ್ತು ಕೃಷಿ ಸಚಿವರಿಗೆ ಇರಬೇಕಿತ್ತು. ಇಡೀ ರಾಜ್ಯದಲ್ಲಿ ಒಂದೇ ಸಮಯಕ್ಕೆ ಬಿತ್ತನೆ ಮಾಡುವುದಿಲ್ಲ. ಹಾಗಾಗಿ ಕಲಬುರ್ಗಿ, ಕೊಪ್ಪಳ, ಶಿವಮೊಗ್ಗ ಹಾಗೂ ಇತರೆ ಜಿಲ್ಲೆಗಳಲ್ಲಿ ಎಷ್ಟು ಯುರಿಯಾ ದಾಸ್ತಾನು ಇಡಬೇಕು, ಬಿತ್ತನೆ ಬೀಜ ಎಷ್ಟು ದಾಸ್ತಾನು ಇಡಬೇಕು ಎನ್ನುವ ಅಂದಾಜು ಮಾಹಿತಿ ಕೃಷಿ ಸಚಿವರಿಗೆ ಇರಬೇಕಾಗಿತ್ತು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ರಸಗೊಬ್ಬರದ ಕಾಳದಂಧೆ
ರಾಜ್ಯದಲ್ಲಿ ರಸಗೊಬ್ಬರದ ಕಾಳದಂಧೆ ನಡೆಯುತ್ತಿದೆ. ರೈತರು ಎರಡುಪಟ್ಟು ಮೂರುಪಟ್ಟು ಹಣ ನೀಡಿ ಯುರಿಯಾ ಗೊಬ್ಬರ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ನೀಡದೆ ಕಳಪೆ ಬಿತ್ತನೆ ಬೀಜ ನೀಡಿದ್ದು, ರೈತರು ಕಂಗಾಲಾಗಿ ಪರದಾಡುತ್ತಿದ್ದಾರೆ. ಇದರ ಪರಿಣಾಮವೇ ಇಂದು ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.
ಕೃಷಿ ಸಚಿವರು ತಕ್ಷಣ ಎಚ್ಚತ್ತುಕೊಂಡು ಕಳಪೆ ಬಿತ್ತನೆ ಬೀಜ ಮತ್ತು ಕಲಬೆರಕೆ ರಸಗೊಬ್ಬರ ನೀಡುವ ಏಜೆನ್ಸಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅವರಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆ ವಿಧಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ರೈತರು ಹೆಚ್ಚು ಬಿತ್ತನೆ ಮಾಡುತ್ತಿದ್ದಾರೆ ಹಾಗೂ ಅದಕ್ಕೆ ಅಗತ್ಯಕ್ಕಿಂತ ಹೆಚ್ಚು ಯುರಿಯಾ ಬೇಕಾಗಿರುತ್ತದೆ ಎಂದು ತಿಳಿದಿದ್ದರೆ. ಈಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಲ್ಲ. ರಾಜ್ಯ ಸರ್ಕಾರ ಮೊದಲೇ ಇದರ ಬಗ್ಗೆ ಚರ್ಚಿಸಿ ಇಲಾಖೆ ತೀರ್ಮಾನ ತೆಗೆದುಕೊಂಡು ಮುಂಚಿತವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಿತ್ತು. ಅದನ್ನು ಸಹ ರಾಜ್ಯ ಸರ್ಕಾರ ಮಾಡಲಿಲ್ಲ ಎಂದು ಆಕ್ಷೇಪಿಸಿದರು.
ಹಿಂದೆ ಬಿಜೆಪಿ ಸರ್ಕಾರದಲ್ಲಿ ರೈತ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಪು ದಾಸ್ತಾನು ಅಂದರೆ ಬಫರ್ ಸ್ಟಾಕಿಗೆ 1000 ಕೋಟಿ ರೂಗಳನ್ನು ನೀಡುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಬಫರ್ ಸ್ಟಾಕಿಗೆ ಮೀಸಲಿರಿಸಿರುವ ಹಣವನ್ನು ಇಳಿಸಿ ಪ್ರಸ್ತುತ 400 ಕೋಟಿ ರೂಗಳನ್ನು ನೀಡುತ್ತಿದ್ದಾರೆ. ಅಂದರೆ 600 ಕೋಟಿ ರೂಗಳಷ್ಟು ಬಫರ್ ಸ್ಟಾಕಿಗೆ ಹಣವನ್ನು ಕಡಿಮೆ ಮಾಡಿರುತ್ತಾರೆ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 4000 ರೂಗಳನ್ನು ರೈತರಿಗೆ ನೀಡುತ್ತಿದ್ದರು. ಯಡಿಯೂರಪ್ಪ ಮಾತ್ರವಲ್ಲದೇ ಬೊಮ್ಮಾಯಿ ಮುಖ್ಯಮಂತ್ರಿಗಳಿದ್ದಾಗ ಅದನ್ನು ಮುಂದುವರೆಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕೆಲವು ದಿನಗಳಲ್ಲಿ ಮಾಡಿರುವ ಮಹತ್ತರ ಕಾರ್ಯ ಏನು ಎಂದರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹಿಂದಿನ ಸರ್ಕಾರ ನೀಡುತ್ತಿದ್ದ ಸಹಾಯಧನ ನಿಲ್ಲಿಸಿದ್ದು ಎಂದು ದೂರಿದರು.
ನ್ಯಾನೋ ಗೊಬ್ಬರ ಜಾಗೃತಿಗೆ ಕೇಂದ್ರ ಸರ್ಕಾರ ಬರಬೇಕೆ?
ಯುರಿಯಾ ಗೊಬ್ಬರದ ಪರಿಹಾರವಾಗಿ ನ್ಯಾನೋ ಗೊಬ್ಬರ ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸುವ, ಮಾಹಿತಿಗಳನ್ನು ನೀಡುವ ಮತ್ತು ಉತ್ತೇಜನ ನೀಡುವಂತಹ ಕೆಲಸಗಳನ್ನು ಯಾರು ಮಾಡಬೇಕು? ಅದಕ್ಕೂ ಮೋದಿ ಜೀ ರವರ ಕೇಂದ್ರ ಸರ್ಕಾರ ಬರಬೇಕೆ ಎಂದು ಪ್ರಶ್ನಿಸಿದರು.
ಇದೆಲ್ಲವೂ ಕೂಡ ರಾಜ್ಯ ಸರ್ಕಾರದ ಕರ್ತವ್ಯ. ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರು ತಮ್ಮ ಕರ್ತವ್ಯವನ್ನು ಮರೆತು ಇಂದು ರೈತರನ್ನು ಬೀದಿಗೆ ತರುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ನಾಡಿಗೆ ಎರಡು ತುತ್ತು ಅನ್ನ ನೀಡುವ ರೈತರಿಗೆ ಸಹಕಾರ ನೀಡದೆ ಸರ್ಕಾರ ಇಂದು ಕೈಚೆಲ್ಲಿ ಕುಳಿತಿದೆ. ಕೇಂದ್ರ ಸರ್ಕಾರದಿಂದ 8 ಲಕ್ಷದ 70 ಸಾವಿರಕ್ಕಿಂತ ಹೆಚ್ಚು ಮೆಟ್ರಿಕ್ ಟನ್ ಯುರಿಯಾ ಬಂದಿದ್ದು, ಇಂದು 5 ಲಕ್ಷದ 25 ಸಾವಿರ ಮೆಟ್ರಿಕ್ ಟನ್ ಯುರಿಯಾ ಮಾತ್ರ ರಾಜ್ಯದ ಮಾರ್ಕೆಟ್‍ನಲ್ಲಿ ಇದೆ ಎಂದರೆ ಉಳಿದ ಸುಮಾರು 2 ಲಕ್ಷದ 50 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಏನಾಗಿದೆ ಎಂದು ಪ್ರಶ್ನಿಸಿದರು.
ರೈತರ ಮಕ್ಕಳಿಗೆ ಅನುಕೂಲವಾಗುವ ರೀತಿ ರೈತ ವಿದ್ಯಾನಿಧಿ ಯೋಜನೆಯನ್ನು ಬಿಜೆಪಿ ಆರಂಭಸಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದನ್ನು ನಿಲ್ಲಿಸಿದೆ. ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಬೇಕಾದರೆ 25000 ರೂ ಖರ್ಚಾಗುತಿತ್ತು. ಇಂದು ಅದು 3 ಲಕ್ಷ ಆಗಿದೆ. ಇನ್ನೂ ಅನೇಕ ವಿಚಾರಗಳು ಇದ್ದು, ಅವೆಲ್ಲವನ್ನು ಸದನದಲ್ಲಿ ಮಾತನಾಡುತ್ತೇವೆ ಎಂದು ತಿಳಿಸಿದರು.