ಬೆಂ.ಗ್ರಾ.ಜಿಲ್ಲೆ: ಮಹಿಳೆಯರು ಸ್ವಾವಲಂಬಿಯಾಗಿ ದುಡಿದು ಆರ್ಥಿಕವಾಗಿ ಸಧೃಡರಾಗಬೇಕು ಎಂದು ಸ್ವ-ಸಹಾಯ ಗುಂಪುಗಳ ಮಹಿಳಾ ಉದ್ದಿಮೆದಾರರು ತಯಾರಿಸಿದ ವಸ್ತು ಮತ್ತು ತಿನಿಸುಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು (Exhibition and Sales Fair) ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ (Syeda Aisha) ಅವರು ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯಡಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಸ್ವ-ಸಹಾಯ ಗುಂಪುಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು.
ಅಧಿಕಾರಿಗಳು ಮತ್ತು ಸಾರ್ವಜನಿಕರು ವಸ್ತುಪ್ರದರ್ಶನ ಮೇಳಕ್ಕೆ ಭೇಟಿ ನೀಡಿ ವಿವಿಧ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿರುವ ತಿಂಡಿ ತಿನಿಸುಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಕರ ಕುಶಲತೆಯಿಂದ ತಯಾರಿಸಿದ ವೈರ್ ಬ್ಯಾಗ್, ಜ್ಯೂಟ್ ಬ್ಯಾಗ್, ಅಲಂಕಾರಿಕ ವಸ್ತುಗಳು, ಹಪ್ಪಳ, ಉಪ್ಪಿನಕಾಯಿ, ಖಾರದ ಪುಡಿ ಹಾಗೂ ದೇಶಿಯವಾಗಿ ತಯಾರಿಸಿದ ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳು ನೋಡುಗರ ಕಣ್ಮನ ಸೆಳೆದವು. ಮೇಳವನ್ನು ವೀಕ್ಷಿಸಿದ ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಅವರು ಕರಕುಶಲ ವಸ್ತು, ಸಿಹಿ ತಿನಿಸು ಮುಂತಾದ ಉತ್ಪನ್ನಗಳನ್ನು ಖರೀದಿಸಿದರು.
ಮೇಳದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾ ನಿರ್ದೇಶಕರಾದ ವಿಠಲ್ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಮುಖ್ಯ ಲೆಕ್ಕಧಿಕಾರಿ ಮಂಜುನಾಥ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ವ-ಸಹಾಯ ಗುಂಪುಗಳ ಸದಸ್ಯರು ಪಾಲ್ಗೊಂಡಿದ್ದರು.