ದೊಡ್ಡಬಳ್ಳಾಪುರ: ಕೃಷಿ ಇಲಾಖೆಯಲ್ಲಿ 2025-26 ನೇ ಸಾಲಿನ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ‘ಆತ್ಮ ಶ್ರೇಷ್ಟ ಕೃಷಿಕ ಪ್ರಶಸ್ತಿ’ಗೆ ( Atma Shreshtha Krushika Award) ಅರ್ಜಿ ಆಹ್ವಾನಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳ ಚಟುವಟಿಕೆಗಳಾದ ಸಮಗ್ರ ಕೃಷಿ, ಸಾವಯವ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ರೇಷ್ಮೆ ವಿಭಾಗದಲ್ಲಿ ವಿಶಿಷ್ಟ ಸಾಧನೆಗೈದ ರೈತರು ಹಾಗೂ ನೂತನ ತಾಂತ್ರಿಕತೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡಿರುವ ರೈತರು/ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇಚ್ಚಿಸುವ ರೈತರು ಕೃಷಿ ಇಲಾಖೆಯ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಅಥವಾ ದೊಡ್ಡಬಳ್ಳಾಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿನ ತಾಂತ್ರಿಕ ವ್ಯವಸ್ಥಾಪಕರನ್ನು ಸಂಪರ್ಕಿಸಿ ನಿಗಧಿತ ಅರ್ಜಿ ನಮೂನೆ ಹಾಗೂ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ರೈತರು ಕನಿಷ್ಟ ಒಂದು ಎಕರೆ ಜಮೀನನ್ನು ಹೊಂದಿರಬೇಕು. ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜಾತಿ ಪ್ರಮಾಣ ಪತ್ರ(ಪ.ಜಾ/ಪ.ಪಂ) ಮತ್ತು ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿರುವ ಛಾಯಾಚಿತ್ರ ಮತ್ತು ಸೂಕ್ತ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ.
ಆತ್ಮ ಶ್ರೇಷ್ಟ ಕೃಷಿಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ಸೆ.15 ಆಗಿರುತ್ತದೆ.
ಪ್ರಶಸ್ತಿಗೆ ಅರ್ಜಿ ಅಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ. ರೈತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಬೇಕೆಂದು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಪಿ ಅವರು ರೈತರಲ್ಲಿ ಮನವಿ ಮಾಡಿರುತ್ತಾರೆ.