ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿ ವ್ಯಕ್ತಿಯೋರ್ವನ ಕೊಲೆ ಆರೋಪದಲ್ಲಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ (Darshan) ನೋಡಲು ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಪರಪ್ಪನ ಅಗ್ರಹಾರಕ್ಕೆ ಸೋಮವಾರ ಸಂಜೆ 4:30 ಸುಮಾರಿಗೆ ಪರತ ಭೇಟಿ ನೀಡಿದರು.
ದರ್ಶನ್ ಭೇಟಿ ಮಾಡಲು ಕಾರಿನಲ್ಲಿ ಬಂದಿದ್ದ ವಿಜಯಲಕ್ಷ್ಮಿಯನ್ನು ಜೈಲಿನ ಚೆಕ್‌ಪೋಸ್ಟ್ ಬಳಿಯೇ ತಡೆಯಲಾಯಿತು. ಜೈಲಿನ ಮುಖ್ಯ ದ್ವಾರದವರೆಗೆ ಕಾರಿನಲ್ಲಿ ತೆರಳಲು ಅಧಿಕಾರಿಗಳ ಬಳಿ ವಿಜಯಲಕ್ಷ್ಮಿ ಮನವಿ ಮಾಡಿಕೊಂಡರೂ, ಪೊಲೀಸ್ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಲಿಲ್ಲ.
ಅಂತಿಮವಾಗಿ ಚೆಕ್ ಪೋಸ್ಟ್ ಬಳಿಯಿಂದ ನಡೆದುಕೊಂಡೇ ವಿಜಯಲಕ್ಷ್ಮಿ ಜೈಲಿನ ಮುಖ್ಯದ್ವಾರ ತಲುಪಿದರು. ಜೈಲಿನ ಕಚೇರಿಯಲ್ಲಿ ಸಾಮಾನ್ಯರಂತೆ ವಿಜಯಲಕ್ಷ್ಮಿ ಪ್ರವೇಶ ಪಡೆದು ಪತಿಯನ್ನು ಭೇಟಿಯಾದರು. ಜೈಲಿನಲ್ಲಿ ಪತಿ ದರ್ಶನ್ ಪರಿಸ್ಥಿತಿ ಕಂಡು ವಿಜಯಲಕ್ಷ್ಮಿ ಕೆಲಕಾಲ ಭಾವುಕರಾದರು.
ನಂತರ ಹಣ್ಣು ನೀಡಿ ಕುಶಲೋಪರಿ ವಿಚಾರಿಸಿದರು. ಈ ವೇಳೆ ದರ್ಶನ್ ಪತ್ನಿ ಬಳಿ ಮಗ ವಿನೀಶ್ ಬಗ್ಗೆ ವಿಚಾರಿಸಿದರು ಎಂದು ತಿಳಿದುಬಂದಿದೆ. ಸಾಮಾನ್ಯ ಎಂಟ್ರಿ ಪಡೆದಿದ್ದ ಕಾರಣ ಭೇಟಿಗೆ ಕೇವಲ ಅರ್ಧ ಗಂಟೆ ಮಾತ್ರ ಸಮಯ ನೀಡಲಾಗಿತ್ತು. (ಸಂಗ್ರಹ ಚಿತ್ರ ಬಳಸಲಾಗಿದೆ)