ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಹಿನ್ನೆಲೆ ಕರ್ನಾಟಕದಲ್ಲಿ ಮಾಂಸದ ಕಡೆ ಜನ ತಲೆ ಹಾಕುತ್ತಿಲ್ಲ. ಹೀಗಾಗಿ ಕೋಳಿ (Chicken) ಕುರಿ (sheep) ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಉತ್ಪಾದನೆಯೂ ಹೆಚ್ಚಾದ ಹಿನ್ನೆಲೆ, ಸಾಕಣೆಕಾರರು ಸಮಸ್ಯೆ ಎದುರಿಸುತ್ತಿದ್ದಾರೆ.
ಶ್ರಾವಣ ಮಾಸದಲ್ಲಿ ಸಾಮಾನ್ಯವಾಗಿ ಮಾಂಸಾಹಾರ ಸೇವಿಸುವವರ ಪ್ರಮಾಣ ಬಹುತೇಕ ಕಡಿಮೆ. ಈ ಮುಂಚೆ ಶ್ರಾವಣ ಮಾಸ ಅಷ್ಟಾಗಿ ಪಾಲನೆ ಕಂಡುಬಾರದೆ ಇದ್ದರು, ಕೆಲ ವರ್ಷಗಳಿಂದ ಈಚೆಗೆ ಬಹುತೇಕರು ಶ್ರಾವಣ ಮಾಸವನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಿದ್ದು, ಈ ಒಂದು ತಿಂಗಳ ಕಾಲ ಮಾಂಸ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತಿದ್ದಾರೆ. ಶ್ರಾವಣ ಮಾಸ ಆರಂಭವಾದಾಗಿನಿಂದ ಗೌರಿ- ಗಣೇಶ ಹಬ್ಬ ಮುಗಿಯುವವರೆಗೂ ಅನೇಕ ಹಿಂದೂಗಳು ಮಾಂಸಾಹಾರ ಸೇವನೆ ಮಾಡುತ್ತಿಲ್ಲ.
ಇದರಿಂದ ಕೋಳಿ, ಕುರಿ ಉದ್ಯಮಕ್ಕೆ ಸಾಕಷ್ಟು ಸಮಸ್ಯೆ ಎದುರಾಗಿದೆ.
ಮೂಲಗಳ ಮಾಹಿತಿ ಅನ್ವಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 275ಕ್ಕೂ ಹೆಚ್ಚು ಕೋಳಿ, 250ಕ್ಕೂ ಹೆಚ್ಚು ಕುರಿ ಪಾರಂ ಇದ್ದು, ಸುಮಾರು 500ಕ್ಕೂ ಹೆಚ್ಚು ಮಂದಿ ಕೋಳಿ, ಕುರಿ ಫಾರ್ಮ್‌ಗಳ ಮೂಲಕ ಸಾಕಣೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ತಾಲ್ಲೂಕಿನಲ್ಲಿ ಪ್ರತಿ ವಾರ ಸುಮಾರು ಐದಾರು ಲಕ್ಷ ಕೆಜಿ ಕೋಳಿ, ನೂರಾರು ಕುರಿ ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಇದು ಬೇಡಿಕೆ ಅನುಸಾರ ಮಾರಾಟವಾಗುತ್ತಿತ್ತು. ಆದರೆ ಸದ್ಯ ಶ್ರಾವಣ ಹಿನ್ನೆಲೆ ಬೇಡಿಕೆಯು ಶೇ.50ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ದೊಡ್ಡಬಳ್ಳಾಪುರದ ಪ್ರಸಿದ್ಧ HAJ ಚಿಕನ್ ಸೆಂಟರ್ ಮಾಲೀಕ ಅಂಬರೀಶ್.
ಆದಾಗ್ಯೂ ಮಾಂಸ ಮಾರಾಟದಲ್ಲಿ ಕಡಿಮೆಯಾಗಿದೆಯಾದರೂ, ಕುರಿ, ಕೋಳಿ ಉದ್ಯಮಿಗಳು ನಷ್ಟದಲ್ಲಿದ್ರು, ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಲೆ ಮಾತ್ರ ಕಡಿಮೆಯಾಗಿಲ್ಲ.
ಇಂದಿನ ಮಾರುಕಟ್ಟೆ ರಿಟೇಲ್‌ನಲ್ಲಿ ಕೋಳಿ ದರ 123 ರೂ. ಇದ್ದು, ಪ್ರತಿ ಕೆಜಿ ಮಾಂಸದ ದರ 175 ರಿಂದ 190 ರೂಪಾಯಿಯಷ್ಟಿದೆ.
ಇನ್ನು ಮೇಕೆ, ಕುರಿ ಮಾಂಸ ಕೆಜಿಗೆ 650 ರಿಂದ 750 ರ ವರೆಗೂ ಮಾರಾಟವಾಗುತ್ತಿದೆ.