ಬೆಂಗಳೂರು: ಇತಿಹಾಸ ಪ್ರಸಿದ್ಧ ಮೈಸೂರು ದಸರಾ (Dasara inauguration) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ಈ ಬಾರಿಯ ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ (Banu mustag) ಅವರನ್ನು ಆಯ್ಕೆ ಮಾಡಿರುವುದಕ್ಕೆ ಸರಕಾರದ ವಿರುದ್ಧ ಬಿಜೆಪಿ (BJP) ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಸಂಸದ ಬಸನಗೌಡ ಪಾಟೀಲ ಯತ್ನಾಲ್ ಆಕ್ಷೇಪ ವ್ಯಕ್ತಪಡಿಸಿದ ಪ್ರಮುಖರಾಗಿದ್ದು, ಬಾನು ಮುಷ್ತಾಕ್ ಅವರನ್ನು ಲೇಖಕಿ ಹಾಗೂ ಹೋರಾಟಗಾರ್ತಿಯಾಗಿ ನಾನು ವೈಯಕ್ತಿಕವಾಗಿ ಗೌರವಿಸುತ್ತೇನೆ. ಆದರೆ, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ದಸರಾ ಉದ್ಘಾಟಿಸುವುದು, ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿಬರೆದುಕೊಂಡಿದಾರೆ. ಇಸ್ಲಾಂ ಧರ್ಮದ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಮೂರ್ತಿ ಪೂಜೆಯನ್ನು ಧಿಕ್ಕರಿಸುವ ಇಸ್ಲಾಂ, ಒಂದು ದೇವರು ಹಾಗೂ ಒಂದು ಗ್ರಂಥವನ್ನೇ ಒಪ್ಪಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ಅವರು ಇನ್ನೂ ಇದ್ದಾರೆಯೇ? ಎಲ್ಲಾ ಮಾರ್ಗಗಳೂ ಅಂತಿಮವಾಗಿ ಒಂದೇ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಅವರು ನಂಬುತ್ತಾ ರೆಯೇ? ಈ ಬಗ್ಗೆ ಮೊದಲು ಬಾನು ಮುಸ್ತಾಕ್ ಅವರು ಸ್ಪಷ್ಟನೆ ನೀಡುವುದು ಅಗತ್ಯವಿದೆ. ಅವರು ಈ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡದೆ ದಸರಾ ಉದ್ಘಾಟಿಸುವುದು ಸರಿಯಲ್ಲ.
ದಸರಾ ಉತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಅಥವಾ ಕವಿಗೋಷ್ಠಿಯಂತಹ ಸಾಹಿತ್ಯ ಕಾರ್ಯ ಕಾರ್ಯಕ್ರಮಗಳನ್ನು ಉದ್ಘಾಟಿಸುವ ಅತಿಥಿಯಾಗಿ ಅವರು ಭಾಗವಹಿಸುವುದು ಸಮಂಜಸವಾಗಿದೆ ಎಂದು ಸಲಹೆ ನೀಡಿದ್ದಾರೆ.
ಇನ್ನೂ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಸುದ್ದಿಗಾರರೊಂದಿಗೆ ಮಾತನಾಡಿ, ಧಾರ್ಮಿಕ ಆಚರಣೆಗೂ ಬಾನು ಮುಷ್ತಾಕ್ ಅವರಿಗೆ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.
ದಸರಾ ಉದ್ಘಾಟಕರ ಹೆಸರಿನ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿರುವ ಅವರು, ದಸರಾ ನಾಡ ಹಬ್ಬ ಜಾತ್ಯಾತೀತದ ಪ್ರತೀಕ ಅಲ್ಲ ಧಾರ್ಮಿಕ ಆಚರಣೆ, ಬಾನು ಮುಷ್ತಾಕ್ ರವರ ಧರ್ಮ ಆಚರಣೆ ನಿಮ್ಮ ವೈಯುಕ್ತಿಕ. ದಸರಾ ಧಾರ್ಮಿಕತೆಯ ಪ್ರತೀಕ, ನಮ್ಮ ಹಬ್ಬ, ದುರ್ಗಾ ಪೂಜೆ, ನವರಾತ್ರಿ, ಏನು ಬೇಕಾದರೂ ಕರೆಯಿರಿ, ದಸರಾ ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಯದುವಂಶ ಮುಂದುವರಿಸಿಕೊಂಡು ಬಂದಿದೆ. ಇದು ಜಾತ್ಯಾತೀಶ ಅಲ್ಲ ನಮ್ಮ ಧಾರ್ಮಿಕ ಆಚರಣೆ ಎಂದು ಪ್ರತಿಪಾದಿಸಿದರು.
ಬಾನು ಮುಸ್ತಾಕ್ ಅವರಿಗೆ ತಾಯಿ ಚಾಮುಂಡಿಯ ಬಗ್ಗೆ ನಂಬಿಕೆ ಇದೆಯಾ? ಭಕ್ತೆಯಾಗಿ ಎಲ್ಲಾದರೂ ತೋರಿಸಿದ್ದಾರಾ?. ನಾಡಿನ ಅಧಿದೇವತೆ ಚಾಮುಂಡಿ, ದಸರಾ ವನ್ನು ಭಕ್ತಿ ಭಾವದಿಂದ ಮಾಡುವುದು. ಇದು ಸರಕಾರಿ ಕಾರ್ಯಕ್ರಮವಲ್ಲ, ಇದಕ್ಕೆ ಬಾನು ಮುಷ್ತಾಕ್ ಸೂಕ್ತವಾದ ವ್ಯಕ್ತಿ ಆಗುತ್ತಾರಾ? ಎಂದು ಪ್ರಶ್ನಿಸಿದರು.
ಬಾನು ಮುಷ್ತಾಕ್ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಅಪಾರ ಗೌರವ ಕೊಡಿ. ಆದರೆ ಧಾರ್ಮಿಕ ಆಚರಣೆಗೂ ಬಾನು ಮುಷ್ತಾಕ್ ಅವರಿಗೆ ಏನು ಸಂಬಂಧ?, ಬಾನು ಮುಷ್ತಾಕ್ ಮುಸ್ಲಿಂ ಧರ್ಮದವರು. ಅಲ್ಲಾಹು ಅವರನ್ನು ಹೊರತುಪಡಿಸಿ ಬೇರೆ ಯಾರೂ ದೇವರಿಲ್ಲ ಎಂದು ಇಸ್ಲಾಂ ಧರ್ಮದಲ್ಲಿ ಹೇಳುತ್ತದೆ. ಹಾಗಾದರೆ ಚಾಮುಂಡಿ ದೇವರನ್ನು ನಂಬುತ್ತೀರಾ?. ಸಿದ್ದರಾಮಯ್ಯ ಅನಿಷ್ಟ ಮಹಿಷ ದಸರಾ ಉದ್ಘಾಟನೆ ಮಾಡಿದ ಪರಂಪರೆ ನಿಮ್ಮದು ಎಂದು ಹರಿಹಾಯ್ದರು.
ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದಾಗ ವಿರೋಧ ಮಾಡಿದ್ವಾ..?
ಬಿಜೆಪಿ ಮುಖಂಡರ ಆಕ್ಷೇಪದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸಂತೋಷ್ ಲಾಡ್, ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬಾರದೆಂದು ಸಂವಿಧಾನದಲ್ಲಿ ಇದೆಯೇ?. ಎಲ್ಲದಕ್ಕೂ ಆಕ್ಷೇಪ ಮಾಡ್ತಾ ಹೋದ್ರೆ ಏನು ಮಾಡಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಅತೀ ಹೆಚ್ಚು ದೇಣಿಗೆ ನೀಡಿದವರು ಯಾರು? ಅಜೀಂ ಪ್ರೇಮ್ ಜಿ ಫೌಂಡೇಶನ್‌ನಿಂದ ಎರಡುವರೆ ಲಕ್ಷ ಕೋಟಿ ಹಣ ನೀಡಿದ್ದಾರೆ. ಅವರು ಯಾವ ಸಮಾಜದವರು. ಬಡವರ ಅನುಕೂಲಕ್ಕೆ ಹಣ ಕೊಟ್ಟವರು ಯಾವ ಸಮಾಜದವರು. ಸಂವಿಧಾನದಲ್ಲಿ ಯಾರನ್ನೂ ಮಾಡ ಬಾರದು ಎಂದಿಲ್ಲ, ಸರಕಾರದ ತೀರ್ಮಾನವನ್ನು ಎಲ್ಲರೂ ಸ್ವಾಗತ ಮಾಡಬೇಕು. ಈ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿಗಳನ್ನು ಉದ್ಘಾಟನೆಗೆ ಕರೆಸುತ್ತಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಬ್ದುಲ್ ಕಾಲಂ ರಾಷ್ಟ್ರಪತಿಯಾಗಿದ್ದಾಗ ನಾವು ವಿರೋಧ ಮಾಡಿದ್ದಾ? ಕಲಾಂ ಹಿಂದೂ ವಿರೋಧಿಯಲ್ಲ ಎಂದು ಸಮರ್ಥನೆ ಮಾಡ್ತಾರೆ. ಬಾನು ಮುಷ್ತಾಕ್ ಹೇಗೆ ಹಿಂದೂ ವಿರೋಧಿಯಾಗ್ತಾರೆ? ಎಂದರು.