ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕು ಕೃಷಿ ಇಲಾಖೆ ವತಿಯಿಂದ 2025-26 ನೇ ಸಾಲಿನ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ “ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ”ಗೆ (Atma Shrestha Farmer Award) ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತಾಲ್ಲೂಕಿನಾದ್ಯಂತ ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳ ಚಟುವಟಿಕೆಗಳಾದ ಸಮಗ್ರ ಕೃಷಿ, ಸಾವಯವ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೇ, ಮೀನುಸಾಕಾಣಿಕೆ ಮತ್ತು ಅರಣ್ಯ ಕೃಷಿ ವಿಭಾಗದಲ್ಲಿ ವಿಶಿಷ್ಟ ಸಾಧನೆಗೈದ ರೈತರು ಹಾಗೂ ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಂಡಿರುವ ರೈತರು ಮತ್ತು ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ರೈತರು ಕೃಷಿ ಇಲಾಖೆಯ ಆಯಾ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ನಿಗಧಿತ ಅರ್ಜಿ ನಮೂನೆ ಹಾಗೂ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ರೈತರು ಕನಿಷ್ಠ ಒಂದು ಎಕರೆ ಜಮೀನನ್ನು ಹೊಂದಿರಬೇಕು. ನಿಗಧಿತ ಭರ್ತಿ ಮಾಡಿದ ಅರ್ಜಿಯೊಂದಿಗೆ ಫಹಣಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜಾತಿ ಪ್ರಮಾಣ ಪತ್ರ (ಪರಿಶಿಷ್ಠ ಜಾತಿ & ಪರಿಶಿಷ್ಠ ಪಂಗಡ) ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಂಡಿರುವ ಛಾಯಾ ಚಿತ್ರ ಮತ್ತು ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಸೆಪ್ಟೆಂಬರ್ 20 ಆಗಿರುತ್ತದೆ.
ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಹಾಗೂ ಈ ಪ್ರಶಸ್ತಿಯ ಸದುಪಯೋಗವನ್ನು ಪಡೆದುಕೊಳ್ಳಲು ಬೆಂಗಳೂರು ಉತ್ತರ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವಿ.ಎಂ.ರೂಪ ಅವರು ಬೆಂಗಳೂರು ಉತ್ತರ ತಾಲ್ಲೂಕು ರವರು ರೈತರಲ್ಲಿ ಕೋರಿದ್ದಾರೆ.