ನೆಲಮಂಗಲ: ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ (Accident) ಹೊಡೆದ ಹಿನ್ನೆಲೆಯಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪಿ, ಮತ್ತಿಬ್ಬರು ಬಾಲಕಿಯರು ಗಾಯಗೊಂಡಿರುವ ಘಟನೆ ತುಮಕೂರು-ಬೆಂಗಳೂರು ರಸ್ತೆಯ ಕುಲುವನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತ ದುರ್ದೈವಿಯನ್ನು ತಾಲೂಕಿನ ಗಂಡರಗೂಳಿಪುರ ಗ್ರಾಮದ ದಿವ್ಯಾ (17 ವರ್ಷ) ಎಂದು ಗುರುತಿಸಲಾಗಿದ್ದು, ಗಾಯಗೊಂಡ ನೆಲಮಂಗಲ ಪಟ್ಟಣದ ನಿವಾಸಿಗಳಾದ ಭೂಮಿಕಾ(17 ವರ್ಷ) ಮತ್ತು ನಿರೀಕ್ಷಾ (18 ವರ್ಷ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ರಜೆ ಹಿನ್ನೆಲೆಯಲ್ಲಿ ಒಂಡೇ ಟ್ರಿಪ್ ಶಿವಗಂಗೆ ಬೆಟ್ಟಕ್ಕೆ ಹೋಗಿ ಬರುತ್ತಿದ್ದ ಆರು ಜನ ಸ್ನೇಹಿತರು ಮರಳಿ ನೆಲಮಂಗಲಕ್ಕೆ ವಾಪಸ್ ಮರಳುತ್ತಿದ್ದ ವೇಳೆ, ಟಿಪ್ಪರ್‌ಬೈಕ್ ಗೆ ಡಿಕ್ಕಿ ಹೊಡೆದಿದೆ.
ಆ ಸಂದರ್ಭದಲ್ಲಿ ಬೈಕ್ ನಲ್ಲಿದ್ದ ಮೂವರು ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಘಟನೆ ಕುರಿತು ಟಿಪ್ಪರ್ ಲಾರಿ ಸಹಿತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆಗೆ ಅಸಭ್ಯ ವರ್ತನೆ ಬಾಲಕನಿಗೆ ಥಳಿತ
ನೆಲಮಂಗಲ: ಒಂಟಿ ಮಹಿಳೆಗೆ ದ್ವಿಚಕ್ರ ವಾಹನದಲ್ಲಿ ಬಂದ ಬಾಲಕನೊಬ್ಬ ಕೈ ಹಿಡಿದು ಎಳೆದು ಅಸಭ್ಯ ವರ್ತನೆ ತೋರಿದ್ದಾನೆಂದು ಆರೋಪಿಸಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೆಲಮಂಗಲ ತಾಲೂಕಿನ ಬೋಳಮಾರನಹಳ್ಳಿ ಗ್ರಾಮದಲ್ಲಿ 36 ವರ್ಷದ ಮಹಿಳೆಯನ್ನು 17 ವರ್ಷದ ಅಪ್ರಾಪ್ತನೊಬ್ಬ ಮಾನಭಂಗಕ್ಕೆ ಯತ್ನಿಸಿದ್ದಾನೆಂದು ಆರೋಪಿಸಿದ್ದಾರೆ.
ಮಹಿಳೆ ಬಸ್ ನಿಲ್ದಾಣಕ್ಕೆ ಬೋಳಮಾರನಹಳ್ಳಿ ಗ್ರಾಮದ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಬೈಕಿನಲ್ಲಿ ಹೋಗುತ್ತಿದ್ದ ಬಾಲಕ ವಾಪಸ್ ಬಂದು ಮಹಿಳೆಯ ಕೈ ಹಿಡಿದು ಹೊಲದೊಳಗೆ ಎಳೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಮಹಿಳೆ ಒಡವೆ, ಸರ ಬೇಕಾದಲ್ಲಿ ತೆಗೆದುಕೊಳ್ಳುವಂತೆ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆಕೆಯ ಚೀರಾಟ ಕೇಳಿದ ಗ್ರಾಮಸ್ಥರು ಮಹಿಳೆ ರಕ್ಷಣೆಗೆ ಮುಂದಾಗಿದ್ದು, ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗುವ ವೇಳೆ ಅವನನ್ನು ಹಿಡಿದು ಥಳಿಸಿದ್ದಾರೆ.
ಮಹಿಳೆಯ ಬಳಿ ಹಣ ಕಸಿದುಕೊಳ್ಳಲು ಬಂದಿದ್ದಾಗಿ ಅಪ್ರಾಪ್ತ ಗ್ರಾಮಸ್ಥರ ಬಳಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.