ದೊಡ್ಡಬಳ್ಳಾಪುರ: ಸದಸ್ಯರು ಗುಣಮಟ್ಟದ ಹಾಲನ್ನು ಹೆಚ್ಚಿಗೆ ಸರಬರಾಜು (Milk supply) ಮಾಡುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘದ ಏಳಿಗೆಗೆ ಶ್ರಮಿಸಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ದೊಡ್ಡಬಳ್ಳಾಪುರ ಶಿಬಿರದ ವಿಸ್ತರಣಾಧಿಕಾರಿ ಅನಿತಾ ಎಂ ಹೇಳಿದರು.
ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿಮಾ ಸೌಲಭ್ಯಗಳು, ಬಮೂಲ್ ನಿಂದ ಸಿಗುವ ಸೌಲಭ್ಯಗಳು, ಸದಸ್ಯರ ಮರಣ ಪರಿಹಾರ, ಸಂಘಗಳು ಬೆಂಗಳೂರು ಹಾಲು ಒಕ್ಕೂಟ ಹಾಗೂ ಕರ್ನಾಟಕ ಹಾಲು ಮಹಾಮಂಡಲದಿಂದ ಸಿಗುವ ಸಹಾಯಧನ ಸೌಲಭ್ಯಗಳನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ನೀಡುವ ಸಹಾಯಧನಗಳನ್ನು, ಸಂಘಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಮನಿಆಂಜಿನಪ್ಪ ಮಾತನಾಡಿ, ಸಂಘದ ಮುಂಭಾಗದ ಚಾವಣಿಯನ್ನು ಸ್ವಂತ ಖರ್ಚಿನಿಂದ ಮಾಡಿಸಿಕೊಳ್ಳುತ್ತೇನೆ, ಬಮೂಲ್ ವಿಮೆ, ರಾಸುಗಳ ವಿಮೆ, ರಾಸುಗಳ ಮ್ಯಾಟುಗಳು, ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲ ಸೌಲಭ್ಯವನ್ನು, ವೈದ್ಯರ ಸೇವೆಗಳನ್ನು ಸದಸ್ಯರು ಬಳಸಿಕೊಳ್ಳಬೇಕು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಡಾ. ಎಂ ಚಿಕ್ಕಣ್ಣ 2024 25 ನೇ ಸಾಲಿನ ಜಮಾ ಖರ್ಚು ವೆಚ್ಚವನ್ನು ಸಭೆಯಲ್ಲಿ ಮಂಡಿಸಿ ಮಾತನಾಡಿದ ಅವರು, ರಾಸುಗಳಿಗೆ ಯಾವಾಗಲೂ ಶುದ್ಧ ಕುಡಿಯುವ ನೀರನ್ನು ಒದಗಿಸಿ,ಹಾಲು ಕರೆಯುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಲು ಮರೆಯಬಾರದು, ಕೆಚ್ಚಲನ್ನು ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ ಹಾಲು ಕರೆಯಬೇಕು, ಆರೋಗ್ಯವಂತ ರಾಸಿನ ಶುದ್ದ ಗುಣಮಟ್ಟದ ಹಾಲನ್ನು ಮಾತ್ರ ಸಂಘಕ್ಕೆ ಸರಬರಾಜು ಮಾಡುವಂತೆ ನೋಡಿಕೊಳ್ಳಬೇಕು.
ಕೆಚ್ಚಲು ಬಾವು ಹಾಲನ್ನು ಸಂಘಕ್ಕೆ ಸರಬರಾಜು ಮಾಡಬಾರದು,ಉತ್ತಮ ಗುಣಮಟ್ಟದ ಹಾಲಿಗೆ ಮಾತ್ರ 5 ರೂ. ಪ್ರೋತ್ಸಾಹ ಧನ ಲಭ್ಯವಿರುತ್ತದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಹನುಮಂತಗೌಡ, ನಿರ್ದೇಶಕರಾದ ಮಾರಪ್ಪ, ಕೃಷ್ಣಪ್ಪ, ನಾರಾಯಣಪ್ಪ, ರಾಮಪ್ಪ, ಮುನಿಕೃಷ್ಣ, ಭಾಗ್ಯಮ್ಮ, ಅಕ್ಕಯಮ್ಮ, ವೆಂಕಟಲಕ್ಷ್ಮಮ್ಮ, ಹಾಜರಿದ್ದರು.