ದೊಡ್ಡಬಳ್ಳಾಪುರ: ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆ ಹಾಗೂ ಕೃಷಿಯಲ್ಲಿ (Agriculture) ಡ್ರೋನ್ (Drones) ಬಳಕೆ ಕುರಿತು ತರಬೇತಿ (Training) ಮತ್ತು ಪ್ರಾತ್ಯಕ್ಷಿತೆಯನ್ನು (Demonstration) ತಾಲ್ಲೂಕಿನ ಕಸಬಾ ಹೋಬಳಿಯ ಮೆಣಸಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಪಿ, ಪ್ರಸ್ತುತ ನಮ್ಮ ದೇಶದಲ್ಲಿ ಅತಿ ಹೆಚ್ಚು ಬಳಸುವ ರಸಗೊಬ್ಬರ ಎಂದರೆ ಅದು ಯೂರಿಯಾ. ಯೂರಿಯಾವನ್ನು ಬಿತ್ತನೆ ಮಾಡುವಾಗ ಮತ್ತು ಮೇಲು ಗೊಬ್ಬರವಾಗಿ ಬಳಸಲಾಗುತ್ತದೆ. ಮಣ್ಣಿನ ಮೂಲಕ ಬೆಳೆಗೆ ನೀಡುವ ಯೂರಿಯಾ ರಸಗೊಬ್ಬರ ವಿವಿಧ ರೂಪಗಳಲ್ಲಿ ನಶಿಸಿ ಹೋಗುತ್ತದೆ. ಒಟ್ಟು ಬಳಸಿದ ಯೂರಿಯಾ ರಸಗೊಬ್ಬರದಲ್ಲಿ ಶೇಕಡ 30 ರಿಂದ 35 ರಷ್ಟು ನೀರಿನೊಂದಿಗೆ ಹರಿದು ಹೋಗುತ್ತದೆ ಮತ್ತು ಕೆಳ ಪದರಗಳಲ್ಲಿ ಬಸಿದು ಹೋಗುವುದರಿಂದ ಪೂರ್ಣ ಪ್ರಮಾಣದಲ್ಲಿ ಬೆಳೆಗಳಿಗೆ ಲಭ್ಯವಾಗುವುದಿಲ್ಲ.
ಆದರೆ ನ್ಯಾನೋಯುರಿಯಾ ಬಳಕೆಯಿಂದ ಯೂರಿಯಾ ರಸಗೊಬ್ಬರದ ಶೇಕಡ 10 ರಷ್ಟು ಪ್ರಮಾಣವನ್ನು ಕಡಿತಗೊಳಿಸುವುದಲ್ಲದೆ ಸಸ್ಯಗಳಿಗೆ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಸೂಕ್ತ ಸಮಯದಲ್ಲಿ ಒದಗಿಸಿ ಬೆಳೆಯ ಇಳುವರಿಯನ್ನು ಹೆಚ್ಚಿಸುತ್ತದೆ.
ಪ್ರಸ್ತುತ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಅತಿ ದೊಡ್ಡ ಸಮಸ್ಯೆಯಾಗಿದೆ. ಸಸ್ಯ ಪೋಷಕಾಂಶಗಳನ್ನು ಸಿಂಪರಣೆ ಮಾಡಲು ಅಧಿಕ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಡ್ರೋನ್ ಬಳಸಿ ನ್ಯಾನೋ ಯುರಿಯಾ ಸಿಂಪರಣೆ ಮಾಡುವುದು ಒಳ್ಳೆಯ ಮಾರ್ಗವಾಗಿದೆ ಎಂದು ಸಲಹೆ ನೀಡಿದರು.
ಇಫ್ಕೋ ಸಂಸ್ಥೆಯ ಚೇತನ್ ಮಾತನಾಡಿ, ಯೂರಿಯಾವನ್ನು ಮೇಲುಗೊಬ್ಬರವಾಗಿ ಬೆಳೆಗಳಿಗೆ ಎರಚುವುದು ಪ್ರಸ್ತುತ ಚಾಲ್ತಿಯಲ್ಲಿರುವ ವಿಧಾನವಾಗಿದೆ. ಈ ವಿಧಾನದಿಂದ ಯೂರಿಯಾ ಹರಳುಗಳು ಸಸ್ಯಗಳ ಬೇರುಗಳಿಗೆ ಸೂಕ್ತವಾಗಿ ದೊರೆಯುವುದಿಲ್ಲ. ವಾತವರಣದಲ್ಲಿ ತಾಪಮಾನ ಹೆಚ್ಚಾದಂತೆ ಯೂರಿಯಾದಲ್ಲಿನ ಪೋಷಕಾಂಶವು ಆವಿಯಾಗಬಹುದು ಮತ್ತು ಹೆಚ್ಚಿನ ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ನ್ಯಾನೋಯುರಿಯಾ ಸಿಂಪರಣೆಯು ಯೋಗ್ಯ ಮಾರ್ಗವಾಗಿದೆ.
ನ್ಯಾನೋ ಯೂರಿಯಾದ ಸೂಕ್ಷ್ಮ ಕಣಗಳು ಹೆಚ್ಚಿನ ಸುತ್ತಳತೆ ಹೊಂದಿದ್ದು, ಎಲೆಗಳ ಮೇಲೆ ಸಿಂಪರಣೆ ಮಾಡಿದಾಗ ಶೀರ್ಘವಾಗಿ ಎಲೆಗಳಲ್ಲಿನ ಸೂಕ್ಷ್ಮ ರಂಧ್ರಗಳಾದ ಸ್ಟೋಮ್ಯಾಟ ಮೂಲಕ ಸಸ್ಯದ ಶರೀರದೊಳಗೆ ಸೇರಿ ಪೋಷಕಾಂಶಗಳು ನ್ಯಾಯೋಚಿತವಾಗಿ ಸಸ್ಯದ ಬೆಳವಣಿಗೆಗೆ ದೊರೆಯುವಂತೆ ಮಾಡುತ್ತವೆ.
ನ್ಯಾನೋ ಯೂರಿಯಾ ಬಳಕೆಯಿಂದ ರೈತರ ಖರ್ಚು ಕಡಿಮೆಯಾಗುವುದಲ್ಲದೇ ರೈತರು ಹೆಚ್ಚಿನ ಆದಾಯ ಪಡೆಯಬಹುದು. ರೈತರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.
ಕೆಸ್ತೂರು ಗ್ರಾಮ ಪಂಚಾಯಿತಿಯ ಅದ್ಯಕ್ಷ ಮಂಜುನಾಥ್ ಮಾತನಾಡಿ, ಕೃಷಿ ಇಲಾಖೆಯಿಂದ ತರಬೇತಿ ಕಾರ್ಯಕ್ರಮವನ್ನು ಮತ್ತು ಪ್ರಾತ್ಯಕ್ಷಿತೆ ಆಯೋಜಿಸಿರುವುದು ರೈತರಿಗೆ ಉಪಯೋಗವಾಗಲಿದೆ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ರಾಗಿ ಬೆಳೆಗೆ ಡ್ರೋನ್ ಬಳಸಿ ನ್ಯಾನೋ ಯೂರಿಯಾ ವನ್ನು ಸಿಂಪರಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿತೆ ಕೈಗೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಮ್ಮ, ಗ್ರಾಮ ಪಂಚಾಯಿತಿಯ ಸದಸ್ಯರಾದ ಅಶ್ವಥ್‌ಕುಮಾರ್, ಮುನಿರಾಜು, ಮುರಳಿ, ರಾಜಮ್ಮ, ಮತ್ತು ಮೆಣಸಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪಾಪಣ್ಣ ಸೇರಿದಂತೆ ಮೆಣಸಿ ಕಾಲೋನಿ ಗ್ರಾಮದ ರೈತ ಬಾಂಧವರು, ಪ್ರಗತಿ ಪರ ರೈತರು, ಇಪ್ಕೋ ಸಂಸ್ಥೆಯ ಪ್ರತಿನಿಧಿಗಳು, ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿಗಳು ಹಾಗೂ ಕೃಷಿ ಸಖಿಯರು ಭಾಗವಹಿಸಿದ್ದರು.