ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ (Accident) ಸಂಭವಿಸಿ, ಮಹಿಳೆಯೋರ್ವರು ಸಾವನಪ್ಪಿ, ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗುಮ್ಮನಹಳ್ಳಿ ಸಮೀಪ ಇಂದು ಸಂಜೆ ಸಂಭವಿಸಿದೆ.
ತಾಲೂಕಿನ ಗುಮ್ಮನಹಳ್ಳಿ-ಲಿಂಗಧೀರನಹಳ್ಳಿ ಗೇಟ್ ನಡುವಿನ ತಿರುವಿನಲ್ಲಿ ಮುಖಾಮುಖಿಯಾದ ಸ್ಕೂಟರ್ ಮತ್ತು ಬೈಕ್ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಮೃತ ಮಹಿಳೆಯನ್ನು ಮಧುಗಿರಿ ತಾಲೂಕಿನ ಬಿಜವಾರ ಗ್ರಾಮದ ಶೈಲಜ (42 ವರ್ಷ) ಎಂದು ಗುರುತಿಸಲಾಗಿದ್ದು, ಈಕೆ ಮಗ 19 ವರ್ಷದ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡು ನಗರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ದೊಡ್ಡಬಳ್ಳಾಪುರ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಪೂಜಾ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಹಿಂತಿರುಗಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ
ಅಪಘಾದಲ್ಲಿ ಗಾಯಗೊಂಡ ಉಳಿದ ಇಬ್ಬರು ನೇಪಾಳಿ ಮೂಲದ ಯುವಕರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತಂತೆ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾರದ ಅಂಬುಲೆನ್ಸ್.. ಆಕ್ರೋಶ
ಇನ್ನೂ ಅಪಘಾತ ನಡೆದು ಒಂದು ಗಂಟೆ ಕಳೆದರು ಸ್ಥಳಕ್ಕೆ ಅಂಬುಲೆನ್ಸ್ ಬಾರದೆ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಸಲು ವ್ಯಾಪ್ತಿಯಲ್ಲಿ ಇದ್ದ ಅಂಬುಲೆನ್ಸ್ ಮತ್ತೊಂದು ಅಪಘಾತದಲ್ಲಿ ಗಾಯಗೊಂಡವರ ಕರೆದುಕೊಂಡು ಬೆಂಗಳೂರಿಗೆ ತೆರಳಿದೆ. ಬದಲಿ ಅಂಬುಲೆನ್ಸ್ಗೆ ಕರೆ ಮಾಡಿದರು ಸ್ಥಳಕ್ಕೆ ಬಾರದೆ ಉಳಿದಿದ್ದು, ಗಾಯಾಳುಗಳು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ನರಳಿದ್ದು ಸ್ಥಳದಲ್ಲಿದ್ದವರ ಆಕ್ರೋಶ ವ್ಯಾಪಕವಾಗಿ ಕೇಳಿಬಂತು.
ಟಿ.ವೆಂಕಟರಮಣಯ್ಯ ನೆರವು
ಘಟನೆ ಸಂಭವಿಸಿದ ದಾರಿಯಲ್ಲಿಯೇ ತೆರಳುತ್ತಿದ್ದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು, ಅಪಘಾತ ಕಂಡು ಕಾರು ನಿಲ್ಲಿಸಿ ಸ್ಥಳಕ್ಕೆ ದೌಡಾಯಿಸಿದರು.

ಈ ವೇಳೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ, ಅಂಬುಲೆನ್ಸ್ ಗಾಗಿ ಕಾದು ನಿಂತರು. ಆದರೆ ಅಂಬುಲೆನ್ಸ್ ಬಾರದೆ ಹೋದಾಗ ತಮ್ಮ ಕಾರಿನಲ್ಲಿ ಇದ್ದ ಮಗು ಸೇರಿದಂತೆ ಕುಟುಂಬಸ್ಥರ ಕೆಳಗಿಳಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು.
ಈ ವೇಳೆ 112 ವಾಹನ, ಹಾಗೂ ಅಪಘಾತಕ್ಕೆ ಒಳಗಾದವರ ಸಂಬಂಧಿಕರು ಬಂದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶೈಲಜ ಸಾವನಪ್ಪಿದ್ದಾರೆ.
ಕೆರಳಿದ ಯುವಕರಿಂದ ಆಸ್ಪತ್ರೆಗೆ ಬೇಲಿ
ಅಪಘಾತದಲ್ಲಿ ಗಾಯಗೊಂಡವನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಲಭ್ಯವಿಲ್ಲವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಇರುವುದರಿಂದ ಕೆರಳಿದ ಯುವಕರು ಸಾಸಲು ಸರ್ಕಾರಿ ಆಸ್ಪತ್ರೆ ಬಾಗಿಲಿಗೆ ಬೇಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸಾಸಲು ಹೋಬಳಿ ಕೇಂದ್ರವಾಗಿದ್ದು, 24X7 ಕಾರ್ಯನಿರ್ವಹಿಸಬೇಕಿದೆ. ಆದರೆ ಇಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದ ಯಾವುದೇ ಸೌಲಭ್ಯ ದೊರಕುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ದೊಡ್ಡಬೆಳವಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು.