ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ (Accident) ಸಂಭವಿಸಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗುಮ್ಮನಹಳ್ಳಿ ಸಮೀಪ ಇಂದು ಸಂಜೆ ಸಂಭವಿಸಿದೆ.
ತಾಲೂಕಿನ ಗುಮ್ಮನಹಳ್ಳಿ-ಲಿಂಗಧೀರನಹಳ್ಳಿ ಗೇಟ್ ನಡುವಿನ ತಿರುವಿನಲ್ಲಿ ಮುಖಾಮುಖಿಯಾದ ಸ್ಕೂಟರ್ ಮತ್ತು ಬೈಕ್ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಬೆನ್ನಲ್ಲೇ ದಾರಿ ಹೋಕರು ಅಂಬುಲೆನ್ಸ್ಗೆ ಕರೆ ಮಾಡಿ ಒಂದು ಗಂಟೆ ಕಾದರು ಸ್ಥಳಕ್ಕೆ ಬಾರದೆ ಇರುವ ಕಾರಣ, ಸುಮಾರು ಒಂದು ಗಂಟೆಗಳ ಕಾಲ ಗಾಯಗೊಂಡವರು ನಡು ರಸ್ತೆಯಲ್ಲಿಯೇ ನರಳಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಟಿ.ವೆಂಕಟರಮಣಯ್ಯ ನೆರವು

ಘಟನೆ ಸಂಭವಿಸಿದ ದಾರಿಯಲ್ಲಿಯೇ ತೆರಳುತ್ತಿದ್ದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು, ಅಪಘಾತ ಕಂಡು ಕಾರು ನಿಲ್ಲಿಸಿ ಸ್ಥಳಕ್ಕೆ ದೌಡಾಯಿಸಿದರು, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ, ತಮ್ಮ ಕಾರಿನಲ್ಲಿ ಇದ್ದ ಮಗು ಸೇರಿದಂತೆ ಕುಟುಂಬಸ್ಥರ ಕೆಳಗಿಳಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಲು ಮುಂದಾದರು. ಈ ವೇಳೆ 112 ವಾಹನ ಸ್ಥಳಕ್ಕೆ ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ಕಳಿಸಿಕೊಡಲಾಯಿತು.
ಬಳಿಕ ಅಧಿಕಾರಗಳಿಗೆ ಕರೆ ಮಾಡಿ ಟಿ.ವೆಂಕಟರಮಣಯ್ಯ ಅವರು ಸಮರ್ಪಕವಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ಗಾಯಗೊಂಡವರನ್ನು ತಾಯಿ ಮತ್ತು ಮಗ ಮಧುಗಿರಿ ತಾಲೂಕಿನ ಬಿಜವಾರ ಗ್ರಾಮದವರು ಎನ್ನಲಾಗಿದ್ದು, ಇನ್ನಿಬ್ಬರು ನೇಪಾಳಿ ಮೂಲದವರು ಎನ್ನಲಾಗುತ್ತಿದೆ.
ಹೊಸಹಳ್ಳಿ ಮತ್ತು ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ನಡುವೆ ಘಟನೆ ಸಂಭವಿಸಿದ್ದು, ಯಾವ ಠಾಣೆ ವ್ಯಾಪ್ತಿಯೆಂದು ಖಚಿತವಾಗಿಲ್ಲ.
ಬಾರದ ಅಂಬುಲೆನ್ಸ್.. ಆಕ್ರೋಶ
ಇನ್ನೂ ಘಟನೆ ನಡೆದು ಗಂಟೆಗಳು ಕಳೆದರು ಸ್ಥಳಕ್ಕೆ ಅಂಬುಲೆನ್ಸ್ ಬಾರದೆ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಸಲು ವ್ಯಾಪ್ತಿಯಲ್ಲಿ ಇದ್ದ ಅಂಬುಲೆನ್ಸ್ ಮತ್ತೊಂದು ಅಪಘಾತದಲ್ಲಿ ಗಾಯಗೊಂಡವರ ಕರೆದುಕೊಂಡು ಬೆಂಗಳೂರಿಗೆ ತೆರಳಿದೆ. ಬದಲಿ ಅಂಬುಲೆನ್ಸ್ಗೆ ಕರೆ ಮಾಡಿದರು ಸ್ಥಳಕ್ಕೆ ಬರಲಿಲ್ಲವೆಂದು ಆಕ್ರೋಶ ವ್ಯಾಪಕವಾಗಿ ಕೇಳಿಬಂತು.
ಇದನ್ನೂ ಓದಿ; ದೊಡ್ಡಬಳ್ಳಾಪುರ: ಭೀಕರ ಅಪಘಾತ.. ಕೆರಳಿದ ಯುವಕರಿಂದ ಸರ್ಕಾರಿ ಆಸ್ಪತ್ರೆಗೆ ಬೇಲಿ..!